Monday, November 17, 2014

ಡಿಜಿಟಲ್ ದೃಶ್ಯಗಳ ಸಮ್ಮಿಲನದೊಂದಿಗೆ ಯಕ್ಷಗಾನ ಪ್ರದರ್ಶನ: ಹೊಸ ಪ್ರಯೋಗದ ಸಾಧ್ಯತೆ ಮತ್ತು ಸಲಹೆ

ಆಟಕ್ಕೆ ಹೋಗದೆ ತುಂಬಾ ದಿನ ಆಯ್ತು ಅಂತ ಅಂದ್ಕೊಳ್ಳುತ್ತಿರುವಂತೆ ಮೊನ್ನೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಟ ಇದೆ ಅಂತ ಗೊತ್ತಾಯ್ತು. ಆಟದ ಹ್ಯಾಂಡ್ ಬಿಲ್ ನಲ್ಲಿ ಬಿಂಬ - ಪ್ರತಿಬಿಂಬಗಳ ಸಮ್ಮಿಲನದ ವಿನೂತನ ರಂಗ ಸಜ್ಜಿಕೆಯ ಪ್ರಯೋಗ ಎಂದು ಬರೆದಿತ್ತು. ಅದನ್ನು ಓದಿದಾಗ ಅಷ್ಟೇನೂ ಅರ್ಥ ಆಗ್ಲಿಲ್ಲ , ಏನೇ ಇರಲಿ ಆಟ ಹೌದಲ್ಲಾ, ಹೋಗಿ ನೋಡುವ ಎಂದು ಹೋದೆ.

digital screen, drishyaಮೊದಲು ಗಮನಕ್ಕೆ ಬಂದಿದ್ದು, ರಂಗಸ್ಥಳ ಎಂದಿನಂತೆ ಇರಲ್ಲಿಲ್ಲ. ಹಿಮ್ಮೇಳದವರು ಕುಳಿತುಕೊಳ್ಳುವ ಸ್ಥಳ ಹಿಂದೆ ಇರದೇ ಒಂದು ಬದಿಯಲ್ಲಿತ್ತು. ರಂಗಸ್ಥಳದ ಹಿಂದೆ ಒಂದು ದೊಡ್ಡ ಡಿಜಿಟಲ್ ಪರದೆ ಇತ್ತು. ಯಾವುದೇ ಮೈಕ್ ಅಥವಾ ಲೈಟ್ ಗಳು ರಂಗಸ್ಥಳದ ಮುಂಭಾಗದಲ್ಲಿ ಇಲ್ಲದೇ ಇರುವುದು ನೋಡಿ ಖುಷಿ ಆಯ್ತು.  ಎಷ್ಟೋ ಸಲ ಪ್ರದರ್ಶನಕ್ಕೆ ಅಡ್ಡವಾಗಿ ಮುಂಬದಿಯಲ್ಲಿರು ಇರುವ ಮೈಕ್ ಗಳನ್ನು ನೋಡಿ ಇದಕ್ಕೆ ಬೇರೆ ಪರಿಹಾರವೆ ಇಲ್ಲವೇ ಎಂದುಕೊಂಡಿದ್ದೆ. ಇಲ್ಲಿ ಕಲಾವಿದರು ಅಳವಡಿಸಿಕೊಂಡಿದ್ದ ಕೊರ್ಡ್ಲೆಸ್ಸ್ ಮೈಕ್ ಗಳು ಬಹಳ ಚೆನ್ನಾಗಿ ಕೆಲಸ ಮಾಡಿದವು. ಪ್ರದರ್ಶನದ ಮುನ್ನ ಕೆಲವು ಚಿತ್ರಗಳನ್ನು ಪರದೆಯ ಮೇಲೆ ಬಿತ್ತರಿಸಿ ಪರೀಕ್ಷಿಸುತ್ತಿದ್ದರು. ಆಗಲೇ ಬಿಂಬ- ಪ್ರತಿಬಿಂಬ ಅಂದರೆ ಹೀಗಿರಬಹುದು ಅಂತ ಒಂದು ಐಡಿಯಾ ಬಂದಿದ್ದು.

ಯಕ್ಷಗಾನದಲ್ಲಿ ಈ ವಿನೂತನ ಪ್ರಯೋಗದ ಬಗ್ಗೆ ನನ್ನ ಅನಿಸಿಕೆ ಮತ್ತು ಕೆಲವು ಸುಧಾರಣೆಯ ಬಗ್ಗೆ ಈ ನಿರ್ಧಿಷ್ಟ ಪ್ರದರ್ಶನಕ್ಕೆ ಸೀಮಿತವಾಗದಂತೆ ಆದರೂ ಈ ಪ್ರದರ್ಶನದ ಆಧಾರದ ಮೇಲೆ ಹಂಚಿಕೊಳ್ಳುವ ಪ್ರಯತ್ನ ಈ ಬರವಣಿಗೆ. 

ಪ್ರಸಂಗದ ಸನ್ನಿವೇಶ ಹಾಗು ಸಂಧರ್ಭಕ್ಕೆ ಅನುಗುಣವಾದ ಚಿತ್ರ ಅಥವಾ ಚಲನ ಚಿತ್ರ ಗಳನ್ನು ಹಿಂಬದಿಯ ಡಿಜಿಟಲ್ ಪರದೆಯ ಮೇಲೆ ಮೂಡಿಸಿ ಪ್ರೇಕ್ಷಕರನ್ನು ಆ ದೇಶ ಹಾಗು ಕಾಲಕ್ಕೆ ಒಯ್ದು ಒಂದು ಅಮೋಘ ವಾತಾವರಣವನ್ನು ರಂಗಸ್ಥಳದ ಮೇಲೆ ಸೃಷ್ಟಿ ಮಾಡುವ ಪ್ರಯತ್ನ ಇದು. ಕೆಳಗಿನ ವೀಡಿಯೊ ವೀಕ್ಷಿಸಿ. 


ಸಾಮಾನ್ಯವಾಗಿ ಯಕ್ಷಗಾನದಲ್ಲಿ ಸನ್ನಿವೇಶ ನಡೆಯುವ ಸುತ್ತಲಿನ ಪರಿಸರವನ್ನು ಅರ್ಥದ ಮೂಲಕ ಪ್ರೇಕ್ಷಕನ ಮನಸ್ಸಿನಲ್ಲಿ ಕಟ್ಟಿಕೊಡುವ ಅವಕಾಶವಿರುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಈ ಡಿಜಿಟಲ್ ದೃಶ್ಯಗಳ ಸಮ್ಮಿಲನ. ಒಂದು ಗಮನಿಸಬೇಕಾದ ಅಂಶ ಎಂದರೆ ಅರ್ಥ ಹೇಳುವಾಗ ಅಥವಾ ಒಂದು ಕಥೆಯಲ್ಲಿ ಪರಿಸರದ ವಿವರ ಬರೆದಾಗ ವೀಕ್ಷಕ ಅಥವಾ ಓದುಗನಿಗೆ ತನ್ನದೇ ಆದ ವೈಯಕ್ತಿಕ ಕಾಲ್ಪನಿಕ ಚಿತ್ರಣ ನಿರ್ಮಿಸಿಕೊಳ್ಳಲು ಸಾಧ್ಯವಿದೆ. ಆದರೆ ಒಂದು ಚಿತ್ರದ ಮೂಲಕ ಪರಿಸರದ  ದೃಶ್ಯವನ್ನು ಮುಂದಿಟ್ಟಾಗ "ಇದು ಹೀಗೆ" ಎಂಬ ಪ್ರಜ್ಞೆಯನ್ನು ಮೂಡಿಸುತ್ತದೆ. ಯಾವುದೇ ಕಲ್ಪನೆಗೆ ಅವಕಾಶವಿರುವುದಿಲ್ಲ.

ಎರಡು ರೀತಿಯಲ್ಲಿ ಈ ಡಿಜಿಟಲ್ ಪರದೆಯನ್ನು ಬಳಕೆ ಮಾಡಬಹುದು.
೧. ಸಂಧರ್ಭಾನುಸಾರವಾಗಿ ದೃಶ್ಯದ ವಾತಾವರಣ ಅಥವಾ ಪರಿಸರವನ್ನು ಸೃಷ್ಟಿ ಮಾಡುವುದು. ಉದಾಹರಣೆಗೆ, ರಾಜನ ಆಸ್ಥಾನದಲ್ಲಿ ದೃಶ್ಯ ಸಾಗುತ್ತಿದ್ದರೆ ಅದಕ್ಕೆ ಪೂರಕವಾಗುವಂತೆ ಒಂದು ಆಸ್ಥಾನದ ನಿಶ್ಚಲ ಚಿತ್ರ ತೋರಿಸಬಹುದು.

೨.ಪರದೆಯ ಮುಂಭಾಗದಲ್ಲಿ ಕಲಾವಿದ ಪದ್ಯದ ಸಾಹಿತ್ಯಕ್ಕೆ ಅನುಗುಣವಾಗಿ ಅಭಿನಯಿಸುತ್ತಿರುವಂತೆ ಹಿಂಬದಿಯ ಪರದೆಯ ಮೇಲೆ ಪೂರಕವಾದ ಚಲನ-ಚಿತ್ರಗಳನ್ನು ತೋರಿಸುವುದು. ಉದಾಹರಣೆಗೆ ನವಿಲು ಕುಣಿಯುತಿದೆ... ಎನ್ನುವಾಗ ನಿಜವಾದ ನವಿಲಿನ ನೃತ್ಯವನ್ನು ಪರದೆಯ ಮೇಲೆ ಬಿಂಬಿಸುವುದು.

ಇವೆರಡರಲ್ಲಿ ಎರಡನೆಯದು ನನಗೆ ಅಷ್ಟು ಸಮಂಜಸವಾಗಿ ತೋರಲಿಲ್ಲ. ಏಕೆಂದರೆ ಒಂದು, ಕಲಾವಿದನ ಕುಣಿತ ಹಾಗೂ ಹಿಂಬದಿಯ ಪರದೆಯ ಮೇಲೆ ಏಕ ಕಾಲಕ್ಕೆ ಮೂಡುವ ಚಲನ-ಚಿತ್ರ ಎರಡೂ ಚಲನಶೀಲತೆಯನ್ನು (Movement) ಹೊಂದಿದೆ. ಹೀಗಿರುವಾಗ ಒಬ್ಬ ಪ್ರೇಕ್ಷಕನಲ್ಲಿ ಕುಣಿಯುವುದನ್ನು ನೋಡಬೇಕೋ ಅಥವಾ ಹಿಂಬದಿಯ ಚಲನ ಚಿತ್ರ ನೋಡಬೇಕೋ ಎಂಬ ಗೊಂದಲ ಉಂಟಾಗುತ್ತದೆ. ಎರಡನೆಯದು, ಚಲನ ಚಿತ್ರದಲ್ಲಿ ನಿಜವಾದ ನವಿಲಿನ ನೃತ್ಯವನ್ನೇ ತೋರಿಸುವಾಗ, ಕಲಾವಿದನ ಆ ಬಗೆಯ ಅಭಿನಯದ ಕುಣಿತದ ಮಹತ್ವವೇನು? ನವಿಲು ಕುಣಿಯುತಿದೆ ನೋಡೆ..  ಎಂಬಾಗ ಕಲಾವಿದ ಹಿಂಬದಿಯ ಪರದೆಯನ್ನು ತೋರಿಸುವಂತೆ ನರ್ತಿಸುತ್ತಿದ್ದರು (ಆಗ ಪರದೆಯ ಮೇಲೆ ನೀಲ ಗಗನದ ಚಿತ್ರ ಬರುತ್ತಿತ್ತು ... ಅದು ಬೇರೆ ಬಿಡಿ). ಹಾಗಾದರೆ ನಾವು ಆಟ ನೋಡಲು ಬಂದಿದ್ದೋ ಅಥವಾ ಪಿಕ್ಚರ್ ನೋಡಲೋ?

ಕೊರತೆಗಳು ಮತ್ತು ಸಂಭವನೀಯ ಸುಧಾರಣೆಗಳು:
೧. ಸಾಮಾನ್ಯವಾಗಿ ಯಕ್ಷಗಾನವನ್ನು ಯಾವುದೇ ತುದಿಯಿಂದ ಕುಳಿತು ವೀಕ್ಷಿಸಿದರೂ ಹೆಚ್ಚು ಕಡಿಮೆ ಒಂದೇ ರೀತಿಯ ಅನುಭೂತಿಯನ್ನು ನೀಡುತ್ತದೆ. ಆದರೆ ಈ ಡಿಜಿಟಲ್ ಪರದೆಯ ಪ್ರಯೋಗದಲ್ಲಿ, ರಂಗಸ್ಥಳದ ನೇರಕ್ಕೆ ಕೂತವರಿಗೆ ಪರಿಪೂರ್ಣ ಅನುಭವ ಸಿಗುತ್ತದೆ. ಬಾಗಿದ (curved) ಪರದೆಯಿಂದ ಈ ಕೊರತೆ ನೀಗಿಸಬಹುದೇನೋ. ಆದ್ದರಿಂದ ಇನ್ನೊಮ್ಮೆ ಈ ತರಹದ ಆಟಕ್ಕೆ ಹೋದರೆ ರಂಗಸ್ಥಳಕ್ಕೆ ನೇರವಾಗಿ ಇರುವ ಕುರ್ಚಿಯನ್ನು ಹಿಡಿಯಲು ಮರೆಯಬೇಡಿ!

೨. ಡಿಜಿಟಲ್ ಪರದೆಯನ್ನು ನೆಲದಿಂದ ಸುಮಾರು ಮೂರ್ನಾಲ್ಕು ಅಡಿ ಮೇಲಿನಿಂದ ಪ್ರಾರಂಭವಾಗುವಂತೆ ಅಳವಡಿಸಿದ್ದರು. ನನ್ನ ಅನಿಸಿಕೆಯ ಪ್ರಕಾರ ನೆಲಕ್ಕೆ ಸಮವಾಗಿ ಅಥವಾ ನೆಲದಿಂದ ಕೆಲವೇ ಇಂಚುಗಳ ಮೇಲಿನಿಂದ ಪ್ರಾರಂಭವಾಗುವಂತೆ ಹೊಂದಿಸಿದರೆ ಪರದೆಯು ರಂಗಸ್ಥಳದ ನೆಲದ ಮುಂದುವರಿಕೆಯಂತೆ ತೋರುತ್ತದೆ. ನೆಲ ಹಾಗು ಪರದೆ ಸೇರುವ ಅಂಚನ್ನು ಸ್ಟುಡಿಯೋಗಳಲ್ಲಿರುವಂತೆ ಬಾಗಿಸಿದರೆ (ಸೈಕ್ಲೊರಾಮಾ) ಒಂದು ನಿರಂತರ ಸ್ಥಳದ (infinite wall) ಸೃಷ್ಟಿಯಾಗುತ್ತದೆ. ಪರದೆಯ ಮೇಲೆ ಬಿಂಬಿಸುವ ಚಿತ್ರದ ಪೆರ್ಸ್ಪೆಕ್ಟಿವ್ (perspective) ಕೂಡ ಅದಕ್ಕೆ ಪೂರಕವಾಗಿರಬೇಕು. ಇದರಿಂದ ಆಸ್ಥಾನದ ಚಿತ್ರ ಪರದೆಯ ಮೇಲೆ ಬರುತ್ತಿದ್ದರೆ, ಕಲಾವಿದರು ಆಸ್ಥಾನದಲ್ಲಿಯೇ ನಿಂತು/ಕುಳಿತು ಮಾತನಾಡುತ್ತಿರುವಂತೆ ಭಾಸವಾಗುತ್ತದೆ.

೩. ಮೂರು ಗಂಟೆಗೂ ಮಿಕ್ಕಿ ಸಾಗುವ ಯಕ್ಷಗಾನ ಪ್ರದರ್ಶನದಲ್ಲಿ, ಎಲ್ಲ ದೃಶ್ಯಗಳಿಗೂ ಚಿತ್ರ/ಚಲನ ಚಿತ್ರ ಹೊಂದಿಸುವುದು ಕಷ್ಟದ  ಮಾತೇ. ಅದಕ್ಕೆ ಏಕ ದಿನ ಕ್ರಿಕೆಟ್ ಮ್ಯಾಚ್ ನಲ್ಲಿ ಪವರ್ ಪ್ಲೇ ಉಪಯೋಗಿಸುವಂತೆ ಪರದೆಯ ದೃಶ್ಯಾವಳಿಗಳನ್ನು ಪ್ರಯೋಗಿಸಬಹುದು. ಮಧ್ಯಮ ಓವರ್ ಗಳಲ್ಲಿ ಯಾವುದೇ ಬೌಂಡರಿಗಳಿಲ್ಲದೆ ಬೇಸರವಾಗುವುದನ್ನು ತಡೆಯಲು, ೪೦ ಓವರ್ ಗಳೊಳಗೆ ಬ್ಯಾಟಿಂಗ್ ಪವೆರ್ ಪ್ಲೇ ತೆಗುದುಕೊಳ್ಳಬೇಕೆಂಬ ನಿಯಮವಿದೆ. ಪವರ್ ಪ್ಲೇ ಓವರ್ ಗಳಲ್ಲಿ ಕೇವಲ ಎರಡೇ ಕ್ಷೇತ್ರ ರಕ್ಷಕರು ಬೌಂಡರಿ ಗೆರೆಯಲ್ಲಿರುವುದರಿಂದ ಬ್ಯಾಟ್ಸಮನ್ ೪ ಅಥವಾ ೬ ಹೊಡೆಯುವುದಕ್ಕೆ ಪ್ರೇರಿತನಾಗುತ್ತಾನೆ ಎಂಬುದು ಇದರ ಆಶಯ. ಹಾಗೆಯೇ ಪ್ರದರ್ಶನ ಸಡಿಲವಾಗುವ ಸಮಯದಲ್ಲಿ  ದೃಶ್ಯಾವಳಿಗಳನ್ನು ಪೂರಕವಾಗಿ ಉಪಯೋಗಿಸಿದರೆ, ಆಟ ಪ್ರದರ್ಶನದುದ್ದಕ್ಕೂ ರಂಜಿಸುವಂತೆ ಮಾಡಬಹುದು. ಉದಾಹರಣೆಗೆ ಭೀಷ್ಮ ವಿಜಯದಲ್ಲಿ, ಭೀಷ್ಮನ ಪ್ರವೇಶ ಸಂದರ್ಭದಲ್ಲಿ ಪರದೆಯ ದೃಶ್ಯಾವಳಿಗಳ ಅಗತ್ಯವಿಲ್ಲ.

೪. ಪರದೆಯ ಮೇಲೆ ಬಿತ್ತರಿಸುವ ಚಿತ್ರ/ಚಲನ ಚಿತ್ರಗಳು ಪ್ರಸಂಗದ ಸನ್ನಿವೇಶಗಳಿಗೆ ಅಭಾಸವಾಗದಂತೆ ಎಚ್ಚರಿಕೆ ವಹಿಸಬೇಕು. ಸನ್ನಿವೇಶದ ದೇಶ, ಕಾಲಗಳಿಗೆ ಅನುಗುಣವಾಗಿರಬೇಕು. ಭಾರತದಲ್ಲಿ ನಡೆಯುವ ಕಥೆಗೆ ವಿದೇಶೀಯ ಅಂಶ ಇರುವ ಚಿತ್ರಗಳನ್ನು ಅಥವಾ ಪುರಾಣದಲ್ಲಿ ನಡೆಯುವ ಕಥೆಗೆ ಸಮಕಾಲೀನವೆನ್ನಿಸುವ ಚಿತ್ರಗಳನ್ನು ಬಿಂಬಿಸಿದರೆ ಅಭಾಸವೆನ್ನಿಸದೇ?

೫. ರಂಗಸ್ಥಳ, ಪರದೆಯ ಅಗಲಕ್ಕೆ ಸೀಮಿತವಾಗಿರಬೇಕು. ಪರದೆಯ ಮುಂದೆ ಅದರ ಅಗಲಕ್ಕೆ ಸರಿಯಾದ ಚೌಕಾಕೃತಿಯ ರಂಗಸ್ಥಳವಿದ್ದರೆ, ಕಲಾವಿದ ಆ ಪರಿಧಿಯಲ್ಲೇ ಪ್ರದರ್ಶನ ನೀಡಬೇಕಾಗುತ್ತದೆ. ಇದರಿಂದ ಡಿಜಿಟಲ್ ಪರದೆಯ ಸಂಪೂರ್ಣ ಲಾಭ ಪಡೆಯಬಹುದು. ಈ ಬಿಗಿಯಾದ ಚೌಕಟ್ಟಿನಿಂದ ಒಂದು ಉತ್ತಮ ಪರಿಣಾಮವನ್ನು ನಿರೀಕ್ಷಿಸಬಹುದು.

೬. ಕಲಾವಿದರಿಗೆ ತಮ್ಮ ಹಿಂದೆ ಪರದೆಯೊಂದು ಇದೆ ಎಂಬ ಪ್ರಜ್ಞೆಯಿಂದ, ತಮ್ಮ ಪ್ರದರ್ಶನವನ್ನು ಅದಕ್ಕೆ ಹೊಂದುವಂತೆ ನೀಡಲು ಪ್ರಯತ್ನಿಸುತ್ತಿರುತ್ತಾರೆ. ಹೀಗಾಗಬಾರದು. ಕಲಾವಿದ ಪರದೆಯನ್ನು ಮರೆತು ಎಂದಿನಂತೆ ತನ್ನ ಪ್ರದರ್ಶನ ನೀಡಬೇಕು. ಇದರಿಂದ ಯಕ್ಷಗಾನಕ್ಕೂ, ಕಲಾವಿದರಿಗೂ ಮತ್ತು ಪ್ರೇಕ್ಷಕರಿಗೂ ಒಳ್ಳೆಯದು. ಹೀಗಾಗಬೇಕಾದರೆ,  ದೃಶ್ಯಾವಳಿಗಳನ್ನು ಅತ್ಯಂತ ಜಾಗರೂಕತೆಯಿಂದ, ಪ್ರಸಂಗವನ್ನು ಸಂಪೂರ್ಣ ಅರ್ಥೈಸಿಕೊಂಡು ಆಯ್ಕೆ ಮಾಡಬೇಕು.

೭. ರಂಗಸ್ಥಳದ ಮೇಲೆ ನಡೆಯುವ ಪ್ರದರ್ಶನ ಹಾಗೂ ಪರದೆಯ ದೃಶ್ಯಾವಳಿಗಳು, ಎರಡಕ್ಕೂ ಅತ್ಯತ್ತಮ ಸಿಂಕ್ರೊನೈಸೆಶನ್ ಇರಬೇಕು. ಈ ಪ್ರಯೋಗ ಯಶಸ್ವಿ ಯಾಗಬೇಕಾದರೆ ಇವೆರಡರ ಪರಿಪೂರ್ಣ ಸಮನ್ವಯ ಅತ್ಯಗತ್ಯ. ಇದನ್ನು ಸಾಧಿಸುವುದು ಸುಲಭವೇನಲ್ಲ. ಮೀಡಿಯ ಪ್ಲೇಯರ್ ನ  ಟಾಸ್ಕ್  ಬಾರ್ ಅಥವಾ  ದೃಶ್ಯ ಬದಲಿಸುವಾಗ ಕಂಪ್ಯೂಟರ್ ಸ್ಕ್ರೀನ್ ಕಾಣಿಸುವುದು ಈ ತರಹದ ತಾಂತ್ರಿಕ ವಿಚಾರಗಳನ್ನು ಪೂರ್ಣವಾಗಿ ತಪ್ಪಿಸಬೇಕು. ಈ ನಿಟ್ಟಿನಲ್ಲಿ ಪವರ್ ಪಾಯಿಂಟ್ ಪ್ರೆಸೆಂಟೆಶನ್ (ppt) ಬಳಕೆ ಸಹಕಾರಿಯಾಗಬಲ್ಲದು.

ಈ ಎಲ್ಲ ಸುಧಾರಣೆಗಳೊಂದಿಗೆ ಈ ಯಕ್ಷಗಾನ ಪ್ರಯೋಗವನ್ನು ಕೈಗೊಂಡರೆ ಪ್ರೇಕ್ಷಕರಿಗೆ ಅಮೋಘ ಅನುಭವ ನೀಡುವುದರಲ್ಲಿ ಯಶಸ್ವಿಯಾಗುವುದು ಖಂಡಿತ. ಈ ರೀತಿಯ ಪ್ರಯೋಗವನ್ನು "ಪೂರಕ ದೃಶ್ಯಾವಳಿ ಯಕ್ಷಗಾನ" ಎಂದು ಕರೆಯಬಹುದೇನೋ?

ಒಬ್ಬ ವೀಕ್ಷಕನಾಗಿ ಹಾಗೂ ನನ್ನ ಕ್ರಿಯೇಟಿವ್ ಏಜನ್ಸಿ ಅನುಭವದಿಂದ ಈ ಪ್ರಯೋಗದ ಬಗ್ಗೆ ಇಷ್ಟು ಬರೆದಿದ್ದೇನೆ. ಮುಂದೆ ಈ ರೀತಿಯ ಪ್ರಯೋಗ ಮಾಡುವವರಿಗೆ ಸಹಾಯವಾಗಬಹುದೆಂಬ ಆಶಯ.

Sunday, November 2, 2014

ದ್ವೇಷ ಪ್ರಚಾರಕ ಮಾಧ್ಯಮವಾಗುತ್ತಿರುವ "ಕಾಮೆಂಟ್ ಗಳು"

ಅಂತರ್ಜಾಲದ  ಪೋಸ್ಟ್ ಗಳಲ್ಲಿ , ನ್ಯೂಸ್ ಸ್ಟೋರಿಗಳಲ್ಲಿ, ಸಂಪಾದಕೀಯಗಳಲ್ಲಿ, ವಿಮರ್ಶೆಗಳಲ್ಲಿ, ವೀಡಿಯೊಗಳಲ್ಲಿ ಕಾಮೆಂಟ್ ಬರೆಯುವುದು ಮತ್ತು ಅದಕ್ಕಿಂತ ಹೆಚ್ಚಾಗಿ ಓದುವುದು ಒಂದು ಗೀಳಾಗಿ ಪರಿಣಮಿಸಿದೆ. ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳು  ಮತ್ತು ಇತರ ಕಾಮೆಂಟ್ ಗಳು ಪ್ರತ್ಯೇಕತಾವಾದಿ ನಿಲುವುಗಳನ್ನು ಬಿಂಬಿಸುವ ವೇದಿಕೆಯಂತಾಗಿದೆ. ಧಾರ್ಮಿಕ, ರಾಜಕೀಯ, ಪ್ರಾದೇಶಿಕತೆ, ಜಾತೀಯತೆ ಹಾಗೂ ಇನ್ನಿತರ ಧ್ರುವೀಕರಿಸಿದ  ನಿಲುವುಗಳಿಗೆ  ಸುಲಭವಾಗಿ ಎಡೆ ಮಾಡಿಕೊಡುವಂತಹ ವಿಚಾರಗಳ  ಕಾಮೆಂಟ್ ಮತ್ತು ಪೋಸ್ಟ್ ಗಳು ಯಾವ ವಿಷಯನ್ನು ಓದುತ್ತಿದ್ದರೂ ಅವುಗಳಲ್ಲಿ ತೂರಿಕೊಂಡು ಓದುಗನ ಮನ ಕೆರಳಿಸುತ್ತಿರುತ್ತದೆ. ಅಂತರ್ಜಾಲದಲ್ಲಿ ಇಂತಹ ಅಸಹ್ಯಕರವಾದ ದ್ವೇಷ ಪ್ರಚಾರಗಳ ಹಾವಳಿ ದಿನೇ ದಿನ ತೀವ್ರವಾಗುತ್ತಿದೆ. ಕೆಲವು ಹತಾಶೆಯ ಅಸಭ್ಯ ಕಾಮೆಂಟ್ ಗಳನ್ನು ಓದಿದರಂತೂ ಮಾನವೀಯತೆಯ ಕೊನೆ ಅತಿ ದೂರದಲ್ಲಿಲ್ಲವೆಂದೆನಿಸುತ್ತದೆ. ಇದರಿಂದ ಪ್ರಚೋದನೆಗೆ ಒಳಪಟ್ಟ ಓದುಗನೊಬ್ಬ ತಾನೂ ಈ ದ್ವೇಷ ಪ್ರಚಾರದ ಕೊಳಚೆಯಲ್ಲಿ ಮುಳುಗುವಂತೆ ಪ್ರೇರೇಪಿತಗೊಳ್ಳುತ್ತಾನೆ. ಮಕ್ಕಳು ಮತ್ತು ಯುವ ಪೀಳಿಗೆಯ ಮೇಲೆ ಇಂತಹ ಕಾಮೆಂಟ್ ಮತ್ತು ಪೋಸ್ಟ್ ಗಳಿಂದಾಗುವ ಪರಿಣಾಮವನ್ನು ಊಹಿಸಲು ಅಸಾಧ್ಯ.

ಕಾಮೆಂಟ್ ಗಳಲ್ಲಿ ಯಾವುದೇ ಪೂರ್ವ ಹಿತಾಸಕ್ತಿ ಇಲ್ಲದೆ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಿದರೆ ಒಂದು ಆರೋಗ್ಯಕರವಾದ ಚರ್ಚೆ ಏರ್ಪಟ್ಟು ರಚನಾತ್ಮಕವಾಗಿ ಯೋಚನೆಗಳನ್ನು ನಿರೂಪಿಸಿಕೊಳ್ಳುವ ವೇದಿಕೆಯಾಗುವುದು ಖಂಡಿತ. ಇದೇ ಕಾರಣಕ್ಕಾಗಿ ಅಂತರ್ಜಾಲದಲ್ಲಿ ಕಾಮೆಂಟ್  ಮಾಡುವ ಅವಕಾಶವನ್ನೂ ಕೊಟ್ಟಿರುತ್ತಾರೆ ಹಾಗೂ ನೀವು ಬರೆದಿರುವ ಬ್ಲಾಗ್ ಅಥವಾ ಲೇಖನಗಳ ಬಗ್ಗೆ ಇತರರ ಪ್ರತಿಕ್ರಿಯೆ ತ್ವರಿತವಾಗಿ ನಿಮಗೆ ತಿಳಿಯುತ್ತದೆ.  ಸಕಾರಾತ್ಮಕ ಪ್ರತಿಕ್ರಿಯೆಗಳು ಎಷ್ಟು ಉಪಯುಕ್ತವೋ, ವಿಷಯದ ವಿರುದ್ಧವಾದ ನಕಾರಾತ್ಮಕ ಕಾಮೆಂಟ್ ಗಳು ಲೇಖನ ಹಾಗೂ ಲೇಖಕನನ್ನು ಮೂರ್ಖರಂತೆ ತೋರಿಸಿಬಿಡುತ್ತದೆ.

ಈಗ ಹೇಗಾಗಿದೆಯೆಂದರೆ ಲೇಖನಕ್ಕೆ ಪ್ರತಿಕ್ರಿಯಿಸಿದವರಿಗೆ ಪ್ರತಿಕ್ರಿಯಿಸುವುದು ಅಥವಾ ಅಂತಹ ಪ್ರತಿಕ್ರಿಯೆಗಳನ್ನು ಓದುವುದು ಮುಖ್ಯವಾಗಿಬಿಟ್ಟಿರುತ್ತದೆ. ಈ ಪ್ರತಿಕ್ರಿಯೆಯ ಕಾಮೆಂಟ್ ಗಳು ಹನುಮಂತನ ಬಾಲದಂತೆ ಬೆಳೆಯುತ್ತ ಮೂಲ ಲೇಖನ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ. ಬಹುತೇಕ ಕಾಮೆಂಟ್ ಗಳು ಪೂರ್ವಗ್ರಹ ಪೀಡಿತ ಹಾಗು ಹಿಡನ್ ಅಜೆಂಡಾ ಗಳಿಂದ ಕೂಡಿರುತ್ತದೆ. ಈ ವಿದ್ಯಮಾನವನ್ನು ಅರಗಿಸಿಕೊಂಡ ಬುದ್ದಿವಂತ ಓದುಗನೊಬ್ಬ ಈಗ ಕೇವಲ ಲೇಖನದ ಕಾಮೆಂಟ್ ಗಳನ್ನಷ್ಟೇ ಓದಿ ಲೇಖನದ ವಿಷಯದ ಬಗ್ಗೆ ತನ್ನ ನಿಲುವನ್ನು ನಿರೂಪಿಸಿಕೊಂಡುಬಿಡುತ್ತಾನೆ. ಅರೆಗಳಿಗೆಯ ಈ ಜಗತ್ತಿನಲ್ಲಿ ಯಾರಿಗಿದೆ ಸಮಯ? ಅಕಸ್ಮಾತ್ತಾಗಿ ಎಲ್ಲಿಯಾದರೂ ಸಂಪೂರ್ಣ ಲೇಖನ ಓದಿದರೆ ಅದರ ಬಗ್ಗೆ ಏನು ಅಭಿಪ್ರಾಯ ತಾಳಬೇಕೆಂದು ಕಾಮೆಂಟ್ ನೋಡಿ ನಿರ್ಧರಿಸುತ್ತಾನೆ. ಸ್ವತಃ ಯೋಚನೆ ಮಾಡುವುದರ ಮೊದಲೇ ಕಾಮೆಂಟ್ ನೋಡಿಬಿಟ್ಟಿರುತ್ತಾನೆ. ವಿಷಯದ ಬಗ್ಗೆ ಪೂರ್ವ ಮಾಹಿತಿ ಇಲ್ಲದಿದ್ದರರಂತೂ ಕಾಮೆಂಟ್ ಗಳು ಅಭಿಪ್ರಾಯವನ್ನು ಒಂದೆಡೆಗೆ ಸುಲಭವಾಗಿ ತೇಲಿಸಿಬಿಡುತ್ತದೆ, ಸರಿಯೋ ತಪ್ಪೋ.

ಇದರಿಂದ ಸ್ವಂತ ಯೋಚನಾ ಶಕ್ತಿ ಮತ್ತು ಸಂಶೋಧನಾತ್ಮಕ ಮನೋವೃತ್ತಿ ಬೆಳೆಯುವುದಾದರೂ ಹೇಗೆ?


ಅಂತರ್ಜಾಲದಲ್ಲಿ ಇಂತಹ ವಿಷ ಬೀಜ ಬಿತ್ತುವವರನ್ನು ಇಂಗ್ಲಿಷ್ ನಲ್ಲಿ "ಟ್ರೋಲ್ " ಎಂದು ಕರೆಯುತ್ತಾರೆ. ಚೈನೀಸ್ ಭಾಷೆಯಲ್ಲಿ ಇಂತವರನ್ನು  bái mù ಅಂದರೆ  "ಬಿಳಿ ಕಣ್ಣು " ಎಂದು ಕರೆಯುತ್ತಾರೆ. ಅಂದರೆ ಕಪ್ಪು ಕಣ್ಣು ಗುಡ್ಡೆಗಳೇ ಇಲ್ಲದ ಕಣ್ಣುಗಳು. ಕಣ್ಣಿನ ಬಿಳಿಯ ಭಾಗ ನೋಡಲು ಅಸಮರ್ಥ ವಾಗಿರುತ್ತದೆ. ಅದರಂತೆ ಅಂತರ್ಜಾಲದಲ್ಲಿ ಅವಿವೇಕದಿಂದ ಪೋಸ್ಟ್ ಮಾಡುವವರನ್ನು "ಬಿಳಿ ಕಣ್ಣು" ಎಂದು ಕರೆಯುವುದು ಸೂಕ್ತವಾಗಿದೆ. 

ಕಾಮೆಂಟ್ ಬರೆಯುವಾಗ ಅದು ಯಾವುದೇ ಪೂರ್ವಗ್ರಹ ಪೀಡಿತ ಪ್ರಚಾರವಾಗಿರಬಾರದು. ಕಾಮೆಂಟ್ ಓದಿ ಒಂದು ವಿಷಯದ ಬಗ್ಗೆ ಇತರರು ಹೇಗೆ ಯೋಚನೆ ಮಾಡುತ್ತಾರೆಂದು ತಿಳಿಯುವ ಕುತೂಹಲ ಮನುಷ್ಯನ ಸ್ವಭಾವವಷ್ಟೇ. ಆದರೆ  ಸ್ವಂತ ವಿಚಾರವಿಲ್ಲದೆ ಅವುಗಳ ಪ್ರಭಾವಕ್ಕೊಳಗಾಗಬಾರದು ಎಂಬುದು ನನ್ನ ಅನಿಸಿಕೆ.