Saturday, January 17, 2015

ಮಾನವ - ವನ್ಯ ಜೀವಿ ಸಂಘರ್ಷ ಕಡಿಮೆಗೊಳಿಸುವ ಒಂದು ವಿಧಾನ

ಇತ್ತೀಚಿಗೆ ಬೆಳಗಾವಿ ಜಿಲ್ಲೆಯ ಭೀಮಗಢ ಅಭಯಾರಣ್ಯದಲ್ಲಿ ಹುಲಿಯೊಂದು ಗರ್ಭಿಣಿ ಹೆಂಗಸನ್ನು ಕೊಂದ ಬಗ್ಗೆ ವರದಿಯಾಗಿತ್ತು. ನಂತರ ಜನರ ಆಕ್ರೋಶ, ಒತ್ತಾಯಕ್ಕೆ ಮಣಿದು 'ಕಂಡಲ್ಲಿ ಗುಂಡು' ಆಜ್ಞೆ ಹೊರಡಿಸಿ, ಬೃಹತ್ ಕಾರ್ಯಾಚರಣೆ ನಡೆಸಿ ಆ ಹುಲಿಯನ್ನು ಕೊಂದಿದ್ದೂ ಸುದ್ದಿಯಾಗಿತ್ತು.  ಆ ಮೂಖ ಪ್ರಾಣಿಯನ್ನು ಕೊಲ್ಲುವುದರ ಬದಲು, ಪ್ರಜ್ಞೆ ತಪ್ಪಿಸಿ ಮೃಗಾಲಯದಲ್ಲಾದರೂ ಬಿಡಬಹುದಾಗಿತ್ತು ಎಂಬುದು ನನ್ನ ಅನಿಸಿಕೆ. ಭಾರತದಲ್ಲಿ ಕೇವಲ ಸುಮಾರು ೧೭೦೦ ರಷ್ಟು ಅರಣ್ಯಗಳಲ್ಲಿ ಉಳಿದಿರುವ ಹುಲಿಗಳನ್ನು ಕಾಪಾಡುವಲ್ಲಿ ಅಷ್ಟನ್ನಾದರೂ ಮಾಡಬಹುದಿತ್ತು.

kannada blog wildlifeಹುಲಿಯೊಂದು ಅರಣ್ಯದಲ್ಲಿ ತನ್ನ ಸೀಮೆಯನ್ನು ಗುರುತಿಸಿ ಆ ಪ್ರದೇಶದೊಳಗೆ ಒಂಟಿಯಾಗಿ ಜೀವನ ನಡೆಸುತ್ತದೆ. ತನ್ನ ಕ್ಷೇತ್ರದ ಒಳಗೆ ಬೇರೆ ಯಾವುದೇ ಹುಲಿ ಬರದಂತೆ ರಕ್ಷಣೆ ಮಾಡುತ್ತದೆ.  ಅರಣ್ಯದಲ್ಲಿ ಒಂದು ಹುಲಿಯ ಕ್ಷೇತ್ರದ ವಿಸ್ತಾರ ಆ ಪ್ರದೇಶದಲ್ಲಿರುವ ಬೇಟೆ ಪ್ರಾಣಿಗಳ ಸಾಂದ್ರತೆಯ ಮೇಲೆ ಅವಲಂಬಿಸಿರುತ್ತದೆ. ಗಂಡು ಹುಲಿಯೊಂದು ಬೆಳೆದು ಯೌವನಾವಸ್ಥೆ ತಲುಪಿದಾಗ, ತಾಯಿ ಹುಲಿ ಅದನ್ನು ತನ್ನ ಕ್ಷೇತ್ರದಿಂದ ಹೊರ ದಬ್ಬುತ್ತದೆ. ಆಗ ಆ ಗಂಡು ಹುಲಿ ತನಗಾಗಿ ಕ್ಷೇತ್ರವನ್ನು ಹುಡುಕಿಕೊಳ್ಳುವ ಅವಶ್ಯಕತೆಯನ್ನು ಹೊಂದಿರುತ್ತದೆ. ಇದು ಅರಣ್ಯದ ಹೊಸ ಕ್ಷೇತ್ರವಾಗಿರಬಹುದು ಅಥವಾ ಬೇರೆ ಕ್ಷೇತ್ರದ ಹುಲಿಯೊಂದಿಗೆ ಹೋರಾಡಿ, ಅದರ ಕ್ಷೇತ್ರವನ್ನು ಗೆದ್ದುಕೊಳ್ಳಬಹುದು. ಅರಣ್ಯದ ವಿಸ್ತೀರ್ಣ ಹಾಗು ಅಲ್ಲಿನ ಬೇಟೆ ಪ್ರಾಣಿಗಳ ಸಾಂದ್ರತೆ ಹೆಚ್ಚಿದ್ದರೆ ಹೊಸ ಕ್ಷೇತ್ರ ಹುಡುಕಿಕೊಳ್ಳಲು ಯಾವುದೇ ಸಮಸ್ಯೆಗಳಿರುವುದಿಲ್ಲ. ಇಲ್ಲವಾದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅವುಗಳು ಸ್ವಾಭಾವಿಕವಾಗಿ ಸುಲಭ ಮಾರ್ಗವಾದ ಹೊಸ ಕ್ಷೇತ್ರವನ್ನು ಅರಸುತ್ತಾ  ಕಾಡಿನ ಅಂಚಿನ ಹಳ್ಳಿಗಳತ್ತ ಕಾಲಿಡುತ್ತವೆ. 

ಇನ್ನೊಂದೆಡೆ ಮಾನವನಿಂದ ವ್ಯವಸಾಯಕ್ಕಾಗಿ ಅರಣ್ಯ ನಾಶ ಎಗ್ಗಿಲ್ಲದಂತೆ ಸಾಗಿದೆ.  ಹುಲಿಗಳ ಆವಾಸ ಸ್ಥಾನ ನಿರಂತರವಾಗಿ ಕುಗ್ಗುತ್ತಿದೆ. ಇಂದಿಗೂ ಭಾರತದಲ್ಲಿ ಶೇಕಡಾ ೬೯ ರಷ್ಟು ಜನರು ಹಳ್ಳಿಗಳಲ್ಲೇ ವಾಸವಾಗಿದ್ದಾರೆ. ಅದರಲ್ಲೂ ಕಾಡಿನ ಅಂಚಿನ ಹಳ್ಳಿಗರು ತಮ್ಮ ಜೀವನಕ್ಕೆ ಕಾಡನ್ನು ಒಂದಲ್ಲ ಒಂದು ರೀತಿಯಲ್ಲಿ ಅವಲಂಬಿಸಿಕೊಂಡಿರುವುದರಿಂದ ಕಾಡಿನೊಳಗೆ ಆಗಾಗ ಹೋಗಬೇಕಾದ ಅವಶ್ಯವಿದೆ.   ಇದರಿಂದ ಮಾನವ - ಹುಲಿ ನಡುವಿನ ಮುಖಾ ಮುಖಿ ತಪ್ಪಿಸಲಾರದ ಸ್ಥಿತಿಯಾಗಿದೆ.  

ಒಂದು ಕಡೆಯಿಂದ ಹುಲಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ  ಅವುಗಳ ಅಸ್ತಿತ್ವಕ್ಕೆ ಹೆಚ್ಚು ಅರಣ್ಯ ಪ್ರದೇಶದ ಅಗತ್ಯತೆ. ಇನ್ನೊಂದೆಡೆ ಮಾನವನಿಂದ ಕುಗ್ಗುತ್ತಿರುವ ಹುಲಿಗಳ ಆವಾಸ ಸ್ಥಾನ.  ಈ ಅವಳಿ ಒತ್ತಡದಿಂದ ಮಾನವ ಮತ್ತು ಹುಲಿಗಳ ನಡುವೆ ಸಂಘರ್ಷದ ಘಟನೆಗಳು ಸಾಮಾನ್ಯವಾಗಿ ಕೇಳಿ ಬರುತ್ತಿದೆ.

ಮಾನವ, ಹುಲಿ ಮತ್ತು ಇತರ ವನ್ಯ ಜೀವಿಗಳು ಸಹ ಅಸ್ತಿತ್ವದಲ್ಲಿರುವಂತೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಿಲ್ಲವೇ ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. 

ಮೊನ್ನೆ  ವರ್ಲ್ಡ್ ವೈಡ್  ಫಂಡ್ ಫಾರ್ ನೇಚರ್ - ಈ ಹಿಂದೆ ವರ್ಲ್ಡ್  ವೈಲ್ಡ್  ಲೈಫ್  ಫಂಡ್ (WWF) ಸಂಸ್ಥೆಯಿಂದ ಒಬ್ಬಾಕೆ ಫೋನಾಯಿಸಿದ್ದಳು. ಈ ಸಂಸ್ಥೆ ಹುಲಿ ಸಂರಕ್ಷಣೆಗಾಗಿ ಯಾವ ರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ ಮತ್ತು ಆ ಕಾರ್ಯಕ್ರಮಗಳಿಗೆ ಅಗತ್ಯವಿರುವ ಮೌಲ್ಯವೆಷ್ಟು ಎಂದು ವಿವರಿಸಿ, ನನ್ನಲ್ಲಿ  ಆ ಸಂಸ್ಥೆಗೆ ಡೊನೇಟ್ ಮಾಡಲು ಕೇಳಿಕೊಂಡಳು. ನಾನು ಧನ ಸಹಾಯ ನೀಡಲು ಉತ್ಸುಕನಾದಾಗ, ತಾನೇ ನಾನಿದ್ದಲ್ಲಿಗೆ ಬಂದು ತೆಗೆದುಕೊಂಡು ಹೋಗುವುದಾಗಿ ಹೇಳಿ ನನ್ನ ಆಫೀಸ್ ವಿಳಾಸ ಪಡೆದುಕೊಂಡಳು. ಇದಾದ ಎರಡು ಗಂಟೆ ಅವಧಿಯೊಳಗೆ ನಮ್ಮ ಆಫೀಸಿನಲ್ಲಿ ಹಾಜರಿದ್ದಳು. ನಾನೂ ನನ್ನ ಕೈಲಾದಷ್ಟು ಸಹಾಯ ನೀಡಿದೆ. ಹೀಗೆ ಹುಲಿ ಗಣತಿ, ಸಂರಕ್ಷಣೆ ಮತ್ತಿತರ ವಿಷಯಗಳ ಬಗ್ಗೆ  ಆಕೆಯೊಂದಿಗೆ ಮಾತಾಡುತ್ತಿರುವಾಗ, ನನ್ನ ತಲೆಯಲ್ಲಿ ಕೊರೆಯುತ್ತಿದ್ದ ಪ್ರಶ್ನೆಯನ್ನೂ ಕೇಳಿಬಿಟ್ಟೆ. ಮಾನವ - ಹುಲಿ ಸಂಘರ್ಷವನ್ನು ಕಡಿಮೆ ಮಾಡಲು WWF ಸಂಸ್ಥೆಯು ಯಾವ ವಿಧಾನಗಳನ್ನು ಅನುಸರಿಸುತ್ತಿದೆ ಎಂದು ಕೇಳಿದೆ. ಆಕೆಯ ಉತ್ತರ ಬಹಳ ಕುತೂಹಲಕಾರಿಯಾಗಿತ್ತು.

ಭಾರತದಲ್ಲಿ ಶೇಕಡಾ ೪೯ ರಷ್ಟು ಮನೆಗಳಲ್ಲಿ ಅಡುಗೆ ಇಂಧನವಾಗಿ ಕಟ್ಟಿಗೆಯನ್ನು ಬಳಸುತ್ತಾರೆ. ಗಾಮೀಣ ಪ್ರದೇಶಗಳಲ್ಲಂತೂ ಶೇಕಡಾ ೬೨ ರಷ್ಟು ಮನೆಗಳಲ್ಲಿ ಕಟ್ಟಿಗೆಯೇ ಇಂಧನ. ಕಾಡಿನ ಅಂಚಿನಲ್ಲಿರುವ ಹಳ್ಳಿಗರು ಈ ಇಂಧನ ಕಟ್ಟಿಗೆಗೆ ಕಾಡನ್ನೇ ಅವಲಂಬಿಸಿರುವುದರಿಂದ, ಕಟ್ಟಿಗೆ ತರಲು ಆಗಾಗ ಕಾಡಿನೊಳಗೆ ಹೋಗಬೇಕಾಗುವುದು ಸಹಜ.  ಈ ಸಂಧರ್ಬದಲ್ಲಿ ಹುಲಿ ಮತ್ತು ಇತರ ವನ್ಯ ಜೀವಿಗಳಿಗೆ ಮಾನವ ಎದುರುಗೊಂಡು ಸಂಘರ್ಷಕ್ಕೆ ನಾಂದಿಯಾಗುತ್ತದೆ. ಇದನ್ನು ಅರಿತ WWF ಸಂಸ್ಥೆ, ಉತ್ತರಾಖಂಡ ರಾಜ್ಯದ ರಕ್ಷಿತಾರಣ್ಯದ ಅಂಚಿನಲ್ಲಿರುವ ಕೆಲವು ಹಳ್ಳಿಗಳಲ್ಲಿ ಬಯೋಗ್ಯಾಸನ್ನು ಇಂಧನ ಶಕ್ತಿಯ ಮೂಲವನ್ನಾಗಿಸಿಕೊಳ್ಳಲು ಉತ್ತೇಜನ ನೀಡುತ್ತಿದೆ. ೨೦೦೮ ರಿಂದ ಸುಮಾರು ೨೧೨ ಬಯೋಗ್ಯಾಸ್ ಘಟಕಗಳನ್ನು ೩೦ ಹಳ್ಳಿಗಳಲ್ಲಿ ಸ್ಥಾಪಿಸಿದೆ. ಇದರಿಂದ ಆ ಹಳ್ಳಿಗಳಲ್ಲಿ ಇಂಧನ ಕಟ್ಟಿಗೆಯ ಮೇಲೆ ಅವಲಂಬನೆ ಕಡಿಮೆಯಾಗಿದೆ ಮತ್ತು ಮಾನವ - ವನ್ಯಜೀವಿ ಸಂಘರ್ಷದ ಘಟನೆಗಳು ಇಳಿಮುಖವಾಗಿದೆ.

ಮಾನವ - ವನ್ಯಜೀವಿ ಸಂಘರ್ಷ ಸಮಸ್ಯೆಗೆ ಈ ರೀತಿಯ ಪರಿಹಾರ ಕಂಡುಕೊಂಡು ಕಾರ್ಯಗತ ಗೊಳಿಸುತ್ತಿರುವ WWF ಸಂಸ್ಥೆಯ ಪ್ರಯತ್ನಗಳು ನಿಜಕ್ಕೂ ಶ್ಲಾಘನೀಯ. ಸಮಸ್ಯೆಯ ಮೂಲವನ್ನು ಹುಡುಕಿ, ಮಾನವ - ವನ್ಯಜೀವಿಗಳ ಸಹ ಅಸ್ತಿತ್ವಕ್ಕೆ ಪೂರಕವಾಗುವಂತೆ ಪರಿಹಾರವನ್ನು ಕಾರ್ಯಗತಗೊಳಿಸುತ್ತಿರುವುದು ಸಂಸ್ಥೆಯ ಬದ್ಧತೆಯನ್ನು ತೋರಿಸುತ್ತದೆ.  ನಮ್ಮ ಸಹಾಯ ಧನ ಸದುಪಯೋಗವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇಂತಹ ಸಂಸ್ಥೆಗೆ ಸಹಾಯ ಮಾಡಿದಕ್ಕೆ ಹೆಮ್ಮೆ ಎನಿಸುತ್ತಿದೆ.