Monday, November 17, 2014

ಡಿಜಿಟಲ್ ದೃಶ್ಯಗಳ ಸಮ್ಮಿಲನದೊಂದಿಗೆ ಯಕ್ಷಗಾನ ಪ್ರದರ್ಶನ: ಹೊಸ ಪ್ರಯೋಗದ ಸಾಧ್ಯತೆ ಮತ್ತು ಸಲಹೆ

ಆಟಕ್ಕೆ ಹೋಗದೆ ತುಂಬಾ ದಿನ ಆಯ್ತು ಅಂತ ಅಂದ್ಕೊಳ್ಳುತ್ತಿರುವಂತೆ ಮೊನ್ನೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಟ ಇದೆ ಅಂತ ಗೊತ್ತಾಯ್ತು. ಆಟದ ಹ್ಯಾಂಡ್ ಬಿಲ್ ನಲ್ಲಿ ಬಿಂಬ - ಪ್ರತಿಬಿಂಬಗಳ ಸಮ್ಮಿಲನದ ವಿನೂತನ ರಂಗ ಸಜ್ಜಿಕೆಯ ಪ್ರಯೋಗ ಎಂದು ಬರೆದಿತ್ತು. ಅದನ್ನು ಓದಿದಾಗ ಅಷ್ಟೇನೂ ಅರ್ಥ ಆಗ್ಲಿಲ್ಲ , ಏನೇ ಇರಲಿ ಆಟ ಹೌದಲ್ಲಾ, ಹೋಗಿ ನೋಡುವ ಎಂದು ಹೋದೆ.

digital screen, drishyaಮೊದಲು ಗಮನಕ್ಕೆ ಬಂದಿದ್ದು, ರಂಗಸ್ಥಳ ಎಂದಿನಂತೆ ಇರಲ್ಲಿಲ್ಲ. ಹಿಮ್ಮೇಳದವರು ಕುಳಿತುಕೊಳ್ಳುವ ಸ್ಥಳ ಹಿಂದೆ ಇರದೇ ಒಂದು ಬದಿಯಲ್ಲಿತ್ತು. ರಂಗಸ್ಥಳದ ಹಿಂದೆ ಒಂದು ದೊಡ್ಡ ಡಿಜಿಟಲ್ ಪರದೆ ಇತ್ತು. ಯಾವುದೇ ಮೈಕ್ ಅಥವಾ ಲೈಟ್ ಗಳು ರಂಗಸ್ಥಳದ ಮುಂಭಾಗದಲ್ಲಿ ಇಲ್ಲದೇ ಇರುವುದು ನೋಡಿ ಖುಷಿ ಆಯ್ತು.  ಎಷ್ಟೋ ಸಲ ಪ್ರದರ್ಶನಕ್ಕೆ ಅಡ್ಡವಾಗಿ ಮುಂಬದಿಯಲ್ಲಿರು ಇರುವ ಮೈಕ್ ಗಳನ್ನು ನೋಡಿ ಇದಕ್ಕೆ ಬೇರೆ ಪರಿಹಾರವೆ ಇಲ್ಲವೇ ಎಂದುಕೊಂಡಿದ್ದೆ. ಇಲ್ಲಿ ಕಲಾವಿದರು ಅಳವಡಿಸಿಕೊಂಡಿದ್ದ ಕೊರ್ಡ್ಲೆಸ್ಸ್ ಮೈಕ್ ಗಳು ಬಹಳ ಚೆನ್ನಾಗಿ ಕೆಲಸ ಮಾಡಿದವು. ಪ್ರದರ್ಶನದ ಮುನ್ನ ಕೆಲವು ಚಿತ್ರಗಳನ್ನು ಪರದೆಯ ಮೇಲೆ ಬಿತ್ತರಿಸಿ ಪರೀಕ್ಷಿಸುತ್ತಿದ್ದರು. ಆಗಲೇ ಬಿಂಬ- ಪ್ರತಿಬಿಂಬ ಅಂದರೆ ಹೀಗಿರಬಹುದು ಅಂತ ಒಂದು ಐಡಿಯಾ ಬಂದಿದ್ದು.

ಯಕ್ಷಗಾನದಲ್ಲಿ ಈ ವಿನೂತನ ಪ್ರಯೋಗದ ಬಗ್ಗೆ ನನ್ನ ಅನಿಸಿಕೆ ಮತ್ತು ಕೆಲವು ಸುಧಾರಣೆಯ ಬಗ್ಗೆ ಈ ನಿರ್ಧಿಷ್ಟ ಪ್ರದರ್ಶನಕ್ಕೆ ಸೀಮಿತವಾಗದಂತೆ ಆದರೂ ಈ ಪ್ರದರ್ಶನದ ಆಧಾರದ ಮೇಲೆ ಹಂಚಿಕೊಳ್ಳುವ ಪ್ರಯತ್ನ ಈ ಬರವಣಿಗೆ. 

ಪ್ರಸಂಗದ ಸನ್ನಿವೇಶ ಹಾಗು ಸಂಧರ್ಭಕ್ಕೆ ಅನುಗುಣವಾದ ಚಿತ್ರ ಅಥವಾ ಚಲನ ಚಿತ್ರ ಗಳನ್ನು ಹಿಂಬದಿಯ ಡಿಜಿಟಲ್ ಪರದೆಯ ಮೇಲೆ ಮೂಡಿಸಿ ಪ್ರೇಕ್ಷಕರನ್ನು ಆ ದೇಶ ಹಾಗು ಕಾಲಕ್ಕೆ ಒಯ್ದು ಒಂದು ಅಮೋಘ ವಾತಾವರಣವನ್ನು ರಂಗಸ್ಥಳದ ಮೇಲೆ ಸೃಷ್ಟಿ ಮಾಡುವ ಪ್ರಯತ್ನ ಇದು. ಕೆಳಗಿನ ವೀಡಿಯೊ ವೀಕ್ಷಿಸಿ. 


ಸಾಮಾನ್ಯವಾಗಿ ಯಕ್ಷಗಾನದಲ್ಲಿ ಸನ್ನಿವೇಶ ನಡೆಯುವ ಸುತ್ತಲಿನ ಪರಿಸರವನ್ನು ಅರ್ಥದ ಮೂಲಕ ಪ್ರೇಕ್ಷಕನ ಮನಸ್ಸಿನಲ್ಲಿ ಕಟ್ಟಿಕೊಡುವ ಅವಕಾಶವಿರುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಈ ಡಿಜಿಟಲ್ ದೃಶ್ಯಗಳ ಸಮ್ಮಿಲನ. ಒಂದು ಗಮನಿಸಬೇಕಾದ ಅಂಶ ಎಂದರೆ ಅರ್ಥ ಹೇಳುವಾಗ ಅಥವಾ ಒಂದು ಕಥೆಯಲ್ಲಿ ಪರಿಸರದ ವಿವರ ಬರೆದಾಗ ವೀಕ್ಷಕ ಅಥವಾ ಓದುಗನಿಗೆ ತನ್ನದೇ ಆದ ವೈಯಕ್ತಿಕ ಕಾಲ್ಪನಿಕ ಚಿತ್ರಣ ನಿರ್ಮಿಸಿಕೊಳ್ಳಲು ಸಾಧ್ಯವಿದೆ. ಆದರೆ ಒಂದು ಚಿತ್ರದ ಮೂಲಕ ಪರಿಸರದ  ದೃಶ್ಯವನ್ನು ಮುಂದಿಟ್ಟಾಗ "ಇದು ಹೀಗೆ" ಎಂಬ ಪ್ರಜ್ಞೆಯನ್ನು ಮೂಡಿಸುತ್ತದೆ. ಯಾವುದೇ ಕಲ್ಪನೆಗೆ ಅವಕಾಶವಿರುವುದಿಲ್ಲ.

ಎರಡು ರೀತಿಯಲ್ಲಿ ಈ ಡಿಜಿಟಲ್ ಪರದೆಯನ್ನು ಬಳಕೆ ಮಾಡಬಹುದು.
೧. ಸಂಧರ್ಭಾನುಸಾರವಾಗಿ ದೃಶ್ಯದ ವಾತಾವರಣ ಅಥವಾ ಪರಿಸರವನ್ನು ಸೃಷ್ಟಿ ಮಾಡುವುದು. ಉದಾಹರಣೆಗೆ, ರಾಜನ ಆಸ್ಥಾನದಲ್ಲಿ ದೃಶ್ಯ ಸಾಗುತ್ತಿದ್ದರೆ ಅದಕ್ಕೆ ಪೂರಕವಾಗುವಂತೆ ಒಂದು ಆಸ್ಥಾನದ ನಿಶ್ಚಲ ಚಿತ್ರ ತೋರಿಸಬಹುದು.

೨.ಪರದೆಯ ಮುಂಭಾಗದಲ್ಲಿ ಕಲಾವಿದ ಪದ್ಯದ ಸಾಹಿತ್ಯಕ್ಕೆ ಅನುಗುಣವಾಗಿ ಅಭಿನಯಿಸುತ್ತಿರುವಂತೆ ಹಿಂಬದಿಯ ಪರದೆಯ ಮೇಲೆ ಪೂರಕವಾದ ಚಲನ-ಚಿತ್ರಗಳನ್ನು ತೋರಿಸುವುದು. ಉದಾಹರಣೆಗೆ ನವಿಲು ಕುಣಿಯುತಿದೆ... ಎನ್ನುವಾಗ ನಿಜವಾದ ನವಿಲಿನ ನೃತ್ಯವನ್ನು ಪರದೆಯ ಮೇಲೆ ಬಿಂಬಿಸುವುದು.

ಇವೆರಡರಲ್ಲಿ ಎರಡನೆಯದು ನನಗೆ ಅಷ್ಟು ಸಮಂಜಸವಾಗಿ ತೋರಲಿಲ್ಲ. ಏಕೆಂದರೆ ಒಂದು, ಕಲಾವಿದನ ಕುಣಿತ ಹಾಗೂ ಹಿಂಬದಿಯ ಪರದೆಯ ಮೇಲೆ ಏಕ ಕಾಲಕ್ಕೆ ಮೂಡುವ ಚಲನ-ಚಿತ್ರ ಎರಡೂ ಚಲನಶೀಲತೆಯನ್ನು (Movement) ಹೊಂದಿದೆ. ಹೀಗಿರುವಾಗ ಒಬ್ಬ ಪ್ರೇಕ್ಷಕನಲ್ಲಿ ಕುಣಿಯುವುದನ್ನು ನೋಡಬೇಕೋ ಅಥವಾ ಹಿಂಬದಿಯ ಚಲನ ಚಿತ್ರ ನೋಡಬೇಕೋ ಎಂಬ ಗೊಂದಲ ಉಂಟಾಗುತ್ತದೆ. ಎರಡನೆಯದು, ಚಲನ ಚಿತ್ರದಲ್ಲಿ ನಿಜವಾದ ನವಿಲಿನ ನೃತ್ಯವನ್ನೇ ತೋರಿಸುವಾಗ, ಕಲಾವಿದನ ಆ ಬಗೆಯ ಅಭಿನಯದ ಕುಣಿತದ ಮಹತ್ವವೇನು? ನವಿಲು ಕುಣಿಯುತಿದೆ ನೋಡೆ..  ಎಂಬಾಗ ಕಲಾವಿದ ಹಿಂಬದಿಯ ಪರದೆಯನ್ನು ತೋರಿಸುವಂತೆ ನರ್ತಿಸುತ್ತಿದ್ದರು (ಆಗ ಪರದೆಯ ಮೇಲೆ ನೀಲ ಗಗನದ ಚಿತ್ರ ಬರುತ್ತಿತ್ತು ... ಅದು ಬೇರೆ ಬಿಡಿ). ಹಾಗಾದರೆ ನಾವು ಆಟ ನೋಡಲು ಬಂದಿದ್ದೋ ಅಥವಾ ಪಿಕ್ಚರ್ ನೋಡಲೋ?

ಕೊರತೆಗಳು ಮತ್ತು ಸಂಭವನೀಯ ಸುಧಾರಣೆಗಳು:
೧. ಸಾಮಾನ್ಯವಾಗಿ ಯಕ್ಷಗಾನವನ್ನು ಯಾವುದೇ ತುದಿಯಿಂದ ಕುಳಿತು ವೀಕ್ಷಿಸಿದರೂ ಹೆಚ್ಚು ಕಡಿಮೆ ಒಂದೇ ರೀತಿಯ ಅನುಭೂತಿಯನ್ನು ನೀಡುತ್ತದೆ. ಆದರೆ ಈ ಡಿಜಿಟಲ್ ಪರದೆಯ ಪ್ರಯೋಗದಲ್ಲಿ, ರಂಗಸ್ಥಳದ ನೇರಕ್ಕೆ ಕೂತವರಿಗೆ ಪರಿಪೂರ್ಣ ಅನುಭವ ಸಿಗುತ್ತದೆ. ಬಾಗಿದ (curved) ಪರದೆಯಿಂದ ಈ ಕೊರತೆ ನೀಗಿಸಬಹುದೇನೋ. ಆದ್ದರಿಂದ ಇನ್ನೊಮ್ಮೆ ಈ ತರಹದ ಆಟಕ್ಕೆ ಹೋದರೆ ರಂಗಸ್ಥಳಕ್ಕೆ ನೇರವಾಗಿ ಇರುವ ಕುರ್ಚಿಯನ್ನು ಹಿಡಿಯಲು ಮರೆಯಬೇಡಿ!

೨. ಡಿಜಿಟಲ್ ಪರದೆಯನ್ನು ನೆಲದಿಂದ ಸುಮಾರು ಮೂರ್ನಾಲ್ಕು ಅಡಿ ಮೇಲಿನಿಂದ ಪ್ರಾರಂಭವಾಗುವಂತೆ ಅಳವಡಿಸಿದ್ದರು. ನನ್ನ ಅನಿಸಿಕೆಯ ಪ್ರಕಾರ ನೆಲಕ್ಕೆ ಸಮವಾಗಿ ಅಥವಾ ನೆಲದಿಂದ ಕೆಲವೇ ಇಂಚುಗಳ ಮೇಲಿನಿಂದ ಪ್ರಾರಂಭವಾಗುವಂತೆ ಹೊಂದಿಸಿದರೆ ಪರದೆಯು ರಂಗಸ್ಥಳದ ನೆಲದ ಮುಂದುವರಿಕೆಯಂತೆ ತೋರುತ್ತದೆ. ನೆಲ ಹಾಗು ಪರದೆ ಸೇರುವ ಅಂಚನ್ನು ಸ್ಟುಡಿಯೋಗಳಲ್ಲಿರುವಂತೆ ಬಾಗಿಸಿದರೆ (ಸೈಕ್ಲೊರಾಮಾ) ಒಂದು ನಿರಂತರ ಸ್ಥಳದ (infinite wall) ಸೃಷ್ಟಿಯಾಗುತ್ತದೆ. ಪರದೆಯ ಮೇಲೆ ಬಿಂಬಿಸುವ ಚಿತ್ರದ ಪೆರ್ಸ್ಪೆಕ್ಟಿವ್ (perspective) ಕೂಡ ಅದಕ್ಕೆ ಪೂರಕವಾಗಿರಬೇಕು. ಇದರಿಂದ ಆಸ್ಥಾನದ ಚಿತ್ರ ಪರದೆಯ ಮೇಲೆ ಬರುತ್ತಿದ್ದರೆ, ಕಲಾವಿದರು ಆಸ್ಥಾನದಲ್ಲಿಯೇ ನಿಂತು/ಕುಳಿತು ಮಾತನಾಡುತ್ತಿರುವಂತೆ ಭಾಸವಾಗುತ್ತದೆ.

೩. ಮೂರು ಗಂಟೆಗೂ ಮಿಕ್ಕಿ ಸಾಗುವ ಯಕ್ಷಗಾನ ಪ್ರದರ್ಶನದಲ್ಲಿ, ಎಲ್ಲ ದೃಶ್ಯಗಳಿಗೂ ಚಿತ್ರ/ಚಲನ ಚಿತ್ರ ಹೊಂದಿಸುವುದು ಕಷ್ಟದ  ಮಾತೇ. ಅದಕ್ಕೆ ಏಕ ದಿನ ಕ್ರಿಕೆಟ್ ಮ್ಯಾಚ್ ನಲ್ಲಿ ಪವರ್ ಪ್ಲೇ ಉಪಯೋಗಿಸುವಂತೆ ಪರದೆಯ ದೃಶ್ಯಾವಳಿಗಳನ್ನು ಪ್ರಯೋಗಿಸಬಹುದು. ಮಧ್ಯಮ ಓವರ್ ಗಳಲ್ಲಿ ಯಾವುದೇ ಬೌಂಡರಿಗಳಿಲ್ಲದೆ ಬೇಸರವಾಗುವುದನ್ನು ತಡೆಯಲು, ೪೦ ಓವರ್ ಗಳೊಳಗೆ ಬ್ಯಾಟಿಂಗ್ ಪವೆರ್ ಪ್ಲೇ ತೆಗುದುಕೊಳ್ಳಬೇಕೆಂಬ ನಿಯಮವಿದೆ. ಪವರ್ ಪ್ಲೇ ಓವರ್ ಗಳಲ್ಲಿ ಕೇವಲ ಎರಡೇ ಕ್ಷೇತ್ರ ರಕ್ಷಕರು ಬೌಂಡರಿ ಗೆರೆಯಲ್ಲಿರುವುದರಿಂದ ಬ್ಯಾಟ್ಸಮನ್ ೪ ಅಥವಾ ೬ ಹೊಡೆಯುವುದಕ್ಕೆ ಪ್ರೇರಿತನಾಗುತ್ತಾನೆ ಎಂಬುದು ಇದರ ಆಶಯ. ಹಾಗೆಯೇ ಪ್ರದರ್ಶನ ಸಡಿಲವಾಗುವ ಸಮಯದಲ್ಲಿ  ದೃಶ್ಯಾವಳಿಗಳನ್ನು ಪೂರಕವಾಗಿ ಉಪಯೋಗಿಸಿದರೆ, ಆಟ ಪ್ರದರ್ಶನದುದ್ದಕ್ಕೂ ರಂಜಿಸುವಂತೆ ಮಾಡಬಹುದು. ಉದಾಹರಣೆಗೆ ಭೀಷ್ಮ ವಿಜಯದಲ್ಲಿ, ಭೀಷ್ಮನ ಪ್ರವೇಶ ಸಂದರ್ಭದಲ್ಲಿ ಪರದೆಯ ದೃಶ್ಯಾವಳಿಗಳ ಅಗತ್ಯವಿಲ್ಲ.

೪. ಪರದೆಯ ಮೇಲೆ ಬಿತ್ತರಿಸುವ ಚಿತ್ರ/ಚಲನ ಚಿತ್ರಗಳು ಪ್ರಸಂಗದ ಸನ್ನಿವೇಶಗಳಿಗೆ ಅಭಾಸವಾಗದಂತೆ ಎಚ್ಚರಿಕೆ ವಹಿಸಬೇಕು. ಸನ್ನಿವೇಶದ ದೇಶ, ಕಾಲಗಳಿಗೆ ಅನುಗುಣವಾಗಿರಬೇಕು. ಭಾರತದಲ್ಲಿ ನಡೆಯುವ ಕಥೆಗೆ ವಿದೇಶೀಯ ಅಂಶ ಇರುವ ಚಿತ್ರಗಳನ್ನು ಅಥವಾ ಪುರಾಣದಲ್ಲಿ ನಡೆಯುವ ಕಥೆಗೆ ಸಮಕಾಲೀನವೆನ್ನಿಸುವ ಚಿತ್ರಗಳನ್ನು ಬಿಂಬಿಸಿದರೆ ಅಭಾಸವೆನ್ನಿಸದೇ?

೫. ರಂಗಸ್ಥಳ, ಪರದೆಯ ಅಗಲಕ್ಕೆ ಸೀಮಿತವಾಗಿರಬೇಕು. ಪರದೆಯ ಮುಂದೆ ಅದರ ಅಗಲಕ್ಕೆ ಸರಿಯಾದ ಚೌಕಾಕೃತಿಯ ರಂಗಸ್ಥಳವಿದ್ದರೆ, ಕಲಾವಿದ ಆ ಪರಿಧಿಯಲ್ಲೇ ಪ್ರದರ್ಶನ ನೀಡಬೇಕಾಗುತ್ತದೆ. ಇದರಿಂದ ಡಿಜಿಟಲ್ ಪರದೆಯ ಸಂಪೂರ್ಣ ಲಾಭ ಪಡೆಯಬಹುದು. ಈ ಬಿಗಿಯಾದ ಚೌಕಟ್ಟಿನಿಂದ ಒಂದು ಉತ್ತಮ ಪರಿಣಾಮವನ್ನು ನಿರೀಕ್ಷಿಸಬಹುದು.

೬. ಕಲಾವಿದರಿಗೆ ತಮ್ಮ ಹಿಂದೆ ಪರದೆಯೊಂದು ಇದೆ ಎಂಬ ಪ್ರಜ್ಞೆಯಿಂದ, ತಮ್ಮ ಪ್ರದರ್ಶನವನ್ನು ಅದಕ್ಕೆ ಹೊಂದುವಂತೆ ನೀಡಲು ಪ್ರಯತ್ನಿಸುತ್ತಿರುತ್ತಾರೆ. ಹೀಗಾಗಬಾರದು. ಕಲಾವಿದ ಪರದೆಯನ್ನು ಮರೆತು ಎಂದಿನಂತೆ ತನ್ನ ಪ್ರದರ್ಶನ ನೀಡಬೇಕು. ಇದರಿಂದ ಯಕ್ಷಗಾನಕ್ಕೂ, ಕಲಾವಿದರಿಗೂ ಮತ್ತು ಪ್ರೇಕ್ಷಕರಿಗೂ ಒಳ್ಳೆಯದು. ಹೀಗಾಗಬೇಕಾದರೆ,  ದೃಶ್ಯಾವಳಿಗಳನ್ನು ಅತ್ಯಂತ ಜಾಗರೂಕತೆಯಿಂದ, ಪ್ರಸಂಗವನ್ನು ಸಂಪೂರ್ಣ ಅರ್ಥೈಸಿಕೊಂಡು ಆಯ್ಕೆ ಮಾಡಬೇಕು.

೭. ರಂಗಸ್ಥಳದ ಮೇಲೆ ನಡೆಯುವ ಪ್ರದರ್ಶನ ಹಾಗೂ ಪರದೆಯ ದೃಶ್ಯಾವಳಿಗಳು, ಎರಡಕ್ಕೂ ಅತ್ಯತ್ತಮ ಸಿಂಕ್ರೊನೈಸೆಶನ್ ಇರಬೇಕು. ಈ ಪ್ರಯೋಗ ಯಶಸ್ವಿ ಯಾಗಬೇಕಾದರೆ ಇವೆರಡರ ಪರಿಪೂರ್ಣ ಸಮನ್ವಯ ಅತ್ಯಗತ್ಯ. ಇದನ್ನು ಸಾಧಿಸುವುದು ಸುಲಭವೇನಲ್ಲ. ಮೀಡಿಯ ಪ್ಲೇಯರ್ ನ  ಟಾಸ್ಕ್  ಬಾರ್ ಅಥವಾ  ದೃಶ್ಯ ಬದಲಿಸುವಾಗ ಕಂಪ್ಯೂಟರ್ ಸ್ಕ್ರೀನ್ ಕಾಣಿಸುವುದು ಈ ತರಹದ ತಾಂತ್ರಿಕ ವಿಚಾರಗಳನ್ನು ಪೂರ್ಣವಾಗಿ ತಪ್ಪಿಸಬೇಕು. ಈ ನಿಟ್ಟಿನಲ್ಲಿ ಪವರ್ ಪಾಯಿಂಟ್ ಪ್ರೆಸೆಂಟೆಶನ್ (ppt) ಬಳಕೆ ಸಹಕಾರಿಯಾಗಬಲ್ಲದು.

ಈ ಎಲ್ಲ ಸುಧಾರಣೆಗಳೊಂದಿಗೆ ಈ ಯಕ್ಷಗಾನ ಪ್ರಯೋಗವನ್ನು ಕೈಗೊಂಡರೆ ಪ್ರೇಕ್ಷಕರಿಗೆ ಅಮೋಘ ಅನುಭವ ನೀಡುವುದರಲ್ಲಿ ಯಶಸ್ವಿಯಾಗುವುದು ಖಂಡಿತ. ಈ ರೀತಿಯ ಪ್ರಯೋಗವನ್ನು "ಪೂರಕ ದೃಶ್ಯಾವಳಿ ಯಕ್ಷಗಾನ" ಎಂದು ಕರೆಯಬಹುದೇನೋ?

ಒಬ್ಬ ವೀಕ್ಷಕನಾಗಿ ಹಾಗೂ ನನ್ನ ಕ್ರಿಯೇಟಿವ್ ಏಜನ್ಸಿ ಅನುಭವದಿಂದ ಈ ಪ್ರಯೋಗದ ಬಗ್ಗೆ ಇಷ್ಟು ಬರೆದಿದ್ದೇನೆ. ಮುಂದೆ ಈ ರೀತಿಯ ಪ್ರಯೋಗ ಮಾಡುವವರಿಗೆ ಸಹಾಯವಾಗಬಹುದೆಂಬ ಆಶಯ.

Sunday, November 2, 2014

ದ್ವೇಷ ಪ್ರಚಾರಕ ಮಾಧ್ಯಮವಾಗುತ್ತಿರುವ "ಕಾಮೆಂಟ್ ಗಳು"

ಅಂತರ್ಜಾಲದ  ಪೋಸ್ಟ್ ಗಳಲ್ಲಿ , ನ್ಯೂಸ್ ಸ್ಟೋರಿಗಳಲ್ಲಿ, ಸಂಪಾದಕೀಯಗಳಲ್ಲಿ, ವಿಮರ್ಶೆಗಳಲ್ಲಿ, ವೀಡಿಯೊಗಳಲ್ಲಿ ಕಾಮೆಂಟ್ ಬರೆಯುವುದು ಮತ್ತು ಅದಕ್ಕಿಂತ ಹೆಚ್ಚಾಗಿ ಓದುವುದು ಒಂದು ಗೀಳಾಗಿ ಪರಿಣಮಿಸಿದೆ. ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳು  ಮತ್ತು ಇತರ ಕಾಮೆಂಟ್ ಗಳು ಪ್ರತ್ಯೇಕತಾವಾದಿ ನಿಲುವುಗಳನ್ನು ಬಿಂಬಿಸುವ ವೇದಿಕೆಯಂತಾಗಿದೆ. ಧಾರ್ಮಿಕ, ರಾಜಕೀಯ, ಪ್ರಾದೇಶಿಕತೆ, ಜಾತೀಯತೆ ಹಾಗೂ ಇನ್ನಿತರ ಧ್ರುವೀಕರಿಸಿದ  ನಿಲುವುಗಳಿಗೆ  ಸುಲಭವಾಗಿ ಎಡೆ ಮಾಡಿಕೊಡುವಂತಹ ವಿಚಾರಗಳ  ಕಾಮೆಂಟ್ ಮತ್ತು ಪೋಸ್ಟ್ ಗಳು ಯಾವ ವಿಷಯನ್ನು ಓದುತ್ತಿದ್ದರೂ ಅವುಗಳಲ್ಲಿ ತೂರಿಕೊಂಡು ಓದುಗನ ಮನ ಕೆರಳಿಸುತ್ತಿರುತ್ತದೆ. ಅಂತರ್ಜಾಲದಲ್ಲಿ ಇಂತಹ ಅಸಹ್ಯಕರವಾದ ದ್ವೇಷ ಪ್ರಚಾರಗಳ ಹಾವಳಿ ದಿನೇ ದಿನ ತೀವ್ರವಾಗುತ್ತಿದೆ. ಕೆಲವು ಹತಾಶೆಯ ಅಸಭ್ಯ ಕಾಮೆಂಟ್ ಗಳನ್ನು ಓದಿದರಂತೂ ಮಾನವೀಯತೆಯ ಕೊನೆ ಅತಿ ದೂರದಲ್ಲಿಲ್ಲವೆಂದೆನಿಸುತ್ತದೆ. ಇದರಿಂದ ಪ್ರಚೋದನೆಗೆ ಒಳಪಟ್ಟ ಓದುಗನೊಬ್ಬ ತಾನೂ ಈ ದ್ವೇಷ ಪ್ರಚಾರದ ಕೊಳಚೆಯಲ್ಲಿ ಮುಳುಗುವಂತೆ ಪ್ರೇರೇಪಿತಗೊಳ್ಳುತ್ತಾನೆ. ಮಕ್ಕಳು ಮತ್ತು ಯುವ ಪೀಳಿಗೆಯ ಮೇಲೆ ಇಂತಹ ಕಾಮೆಂಟ್ ಮತ್ತು ಪೋಸ್ಟ್ ಗಳಿಂದಾಗುವ ಪರಿಣಾಮವನ್ನು ಊಹಿಸಲು ಅಸಾಧ್ಯ.

ಕಾಮೆಂಟ್ ಗಳಲ್ಲಿ ಯಾವುದೇ ಪೂರ್ವ ಹಿತಾಸಕ್ತಿ ಇಲ್ಲದೆ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಿದರೆ ಒಂದು ಆರೋಗ್ಯಕರವಾದ ಚರ್ಚೆ ಏರ್ಪಟ್ಟು ರಚನಾತ್ಮಕವಾಗಿ ಯೋಚನೆಗಳನ್ನು ನಿರೂಪಿಸಿಕೊಳ್ಳುವ ವೇದಿಕೆಯಾಗುವುದು ಖಂಡಿತ. ಇದೇ ಕಾರಣಕ್ಕಾಗಿ ಅಂತರ್ಜಾಲದಲ್ಲಿ ಕಾಮೆಂಟ್  ಮಾಡುವ ಅವಕಾಶವನ್ನೂ ಕೊಟ್ಟಿರುತ್ತಾರೆ ಹಾಗೂ ನೀವು ಬರೆದಿರುವ ಬ್ಲಾಗ್ ಅಥವಾ ಲೇಖನಗಳ ಬಗ್ಗೆ ಇತರರ ಪ್ರತಿಕ್ರಿಯೆ ತ್ವರಿತವಾಗಿ ನಿಮಗೆ ತಿಳಿಯುತ್ತದೆ.  ಸಕಾರಾತ್ಮಕ ಪ್ರತಿಕ್ರಿಯೆಗಳು ಎಷ್ಟು ಉಪಯುಕ್ತವೋ, ವಿಷಯದ ವಿರುದ್ಧವಾದ ನಕಾರಾತ್ಮಕ ಕಾಮೆಂಟ್ ಗಳು ಲೇಖನ ಹಾಗೂ ಲೇಖಕನನ್ನು ಮೂರ್ಖರಂತೆ ತೋರಿಸಿಬಿಡುತ್ತದೆ.

ಈಗ ಹೇಗಾಗಿದೆಯೆಂದರೆ ಲೇಖನಕ್ಕೆ ಪ್ರತಿಕ್ರಿಯಿಸಿದವರಿಗೆ ಪ್ರತಿಕ್ರಿಯಿಸುವುದು ಅಥವಾ ಅಂತಹ ಪ್ರತಿಕ್ರಿಯೆಗಳನ್ನು ಓದುವುದು ಮುಖ್ಯವಾಗಿಬಿಟ್ಟಿರುತ್ತದೆ. ಈ ಪ್ರತಿಕ್ರಿಯೆಯ ಕಾಮೆಂಟ್ ಗಳು ಹನುಮಂತನ ಬಾಲದಂತೆ ಬೆಳೆಯುತ್ತ ಮೂಲ ಲೇಖನ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ. ಬಹುತೇಕ ಕಾಮೆಂಟ್ ಗಳು ಪೂರ್ವಗ್ರಹ ಪೀಡಿತ ಹಾಗು ಹಿಡನ್ ಅಜೆಂಡಾ ಗಳಿಂದ ಕೂಡಿರುತ್ತದೆ. ಈ ವಿದ್ಯಮಾನವನ್ನು ಅರಗಿಸಿಕೊಂಡ ಬುದ್ದಿವಂತ ಓದುಗನೊಬ್ಬ ಈಗ ಕೇವಲ ಲೇಖನದ ಕಾಮೆಂಟ್ ಗಳನ್ನಷ್ಟೇ ಓದಿ ಲೇಖನದ ವಿಷಯದ ಬಗ್ಗೆ ತನ್ನ ನಿಲುವನ್ನು ನಿರೂಪಿಸಿಕೊಂಡುಬಿಡುತ್ತಾನೆ. ಅರೆಗಳಿಗೆಯ ಈ ಜಗತ್ತಿನಲ್ಲಿ ಯಾರಿಗಿದೆ ಸಮಯ? ಅಕಸ್ಮಾತ್ತಾಗಿ ಎಲ್ಲಿಯಾದರೂ ಸಂಪೂರ್ಣ ಲೇಖನ ಓದಿದರೆ ಅದರ ಬಗ್ಗೆ ಏನು ಅಭಿಪ್ರಾಯ ತಾಳಬೇಕೆಂದು ಕಾಮೆಂಟ್ ನೋಡಿ ನಿರ್ಧರಿಸುತ್ತಾನೆ. ಸ್ವತಃ ಯೋಚನೆ ಮಾಡುವುದರ ಮೊದಲೇ ಕಾಮೆಂಟ್ ನೋಡಿಬಿಟ್ಟಿರುತ್ತಾನೆ. ವಿಷಯದ ಬಗ್ಗೆ ಪೂರ್ವ ಮಾಹಿತಿ ಇಲ್ಲದಿದ್ದರರಂತೂ ಕಾಮೆಂಟ್ ಗಳು ಅಭಿಪ್ರಾಯವನ್ನು ಒಂದೆಡೆಗೆ ಸುಲಭವಾಗಿ ತೇಲಿಸಿಬಿಡುತ್ತದೆ, ಸರಿಯೋ ತಪ್ಪೋ.

ಇದರಿಂದ ಸ್ವಂತ ಯೋಚನಾ ಶಕ್ತಿ ಮತ್ತು ಸಂಶೋಧನಾತ್ಮಕ ಮನೋವೃತ್ತಿ ಬೆಳೆಯುವುದಾದರೂ ಹೇಗೆ?


ಅಂತರ್ಜಾಲದಲ್ಲಿ ಇಂತಹ ವಿಷ ಬೀಜ ಬಿತ್ತುವವರನ್ನು ಇಂಗ್ಲಿಷ್ ನಲ್ಲಿ "ಟ್ರೋಲ್ " ಎಂದು ಕರೆಯುತ್ತಾರೆ. ಚೈನೀಸ್ ಭಾಷೆಯಲ್ಲಿ ಇಂತವರನ್ನು  bái mù ಅಂದರೆ  "ಬಿಳಿ ಕಣ್ಣು " ಎಂದು ಕರೆಯುತ್ತಾರೆ. ಅಂದರೆ ಕಪ್ಪು ಕಣ್ಣು ಗುಡ್ಡೆಗಳೇ ಇಲ್ಲದ ಕಣ್ಣುಗಳು. ಕಣ್ಣಿನ ಬಿಳಿಯ ಭಾಗ ನೋಡಲು ಅಸಮರ್ಥ ವಾಗಿರುತ್ತದೆ. ಅದರಂತೆ ಅಂತರ್ಜಾಲದಲ್ಲಿ ಅವಿವೇಕದಿಂದ ಪೋಸ್ಟ್ ಮಾಡುವವರನ್ನು "ಬಿಳಿ ಕಣ್ಣು" ಎಂದು ಕರೆಯುವುದು ಸೂಕ್ತವಾಗಿದೆ. 

ಕಾಮೆಂಟ್ ಬರೆಯುವಾಗ ಅದು ಯಾವುದೇ ಪೂರ್ವಗ್ರಹ ಪೀಡಿತ ಪ್ರಚಾರವಾಗಿರಬಾರದು. ಕಾಮೆಂಟ್ ಓದಿ ಒಂದು ವಿಷಯದ ಬಗ್ಗೆ ಇತರರು ಹೇಗೆ ಯೋಚನೆ ಮಾಡುತ್ತಾರೆಂದು ತಿಳಿಯುವ ಕುತೂಹಲ ಮನುಷ್ಯನ ಸ್ವಭಾವವಷ್ಟೇ. ಆದರೆ  ಸ್ವಂತ ವಿಚಾರವಿಲ್ಲದೆ ಅವುಗಳ ಪ್ರಭಾವಕ್ಕೊಳಗಾಗಬಾರದು ಎಂಬುದು ನನ್ನ ಅನಿಸಿಕೆ. 

Saturday, September 27, 2014

ಒಪ್ಪಾನೆ - ಮೂರು ಕಾಸು

ನಮ್ಮ ಅಜ್ಜನವರಾದ ದಿ।। ಜಂಬೆ ಅಚ್ಯುತ ಹೆಬ್ಬಾರರು ೧೯೯೦ ರ ದಶಕದ ಉತ್ತರಾರ್ಧದಲ್ಲಿ  ಬರೆದಿರುವ ಈ ಲೇಖನವನ್ನು ಯಥಾವತ್ತಾಗಿ ಅವರ ಹಸ್ತಪ್ರತಿಯಲ್ಲಿರುವಂತೆ ಇಲ್ಲಿ ನೀಡಿರುತ್ತೇನೆ.

ಈಗೊಂದು ೪೦ ವರ್ಷಗಳ ಹಿಂದೆ ಮಲೆನಾಡಿನ ನಮ್ಮ ಸಂಬಂಧಿಕರಲ್ಲಿಗೆ ಹೋಗಿದ್ದೆ. ಆಗ ಆ ಮನೆಯ ಹಿರಿಯರು ತನ್ನ ಮೊಮ್ಮಗ ಮಾಡಿದ ಯಾವುದೋ ಒಂದು ತಪ್ಪಿಗಾಗಿ  ಹೀಗೆ ಗದರಿಸುತ್ತಿದ್ದರು.

"..... ಮೂರು ಕಾಸಿನ ಕೆಲಸ ಮಾಡಿ ಮುಖ ಕೆಳಗೆ ಹಾಕಿ ನಿಂತಿದ್ದೀಯಲ್ಲ .... ಒಪ್ಪಾನೆ ಬತ್ತದವನೆ... ಇತ್ಯಾದಿ ಇತ್ಯಾದಿ.

ಬೈಗುಳದ ಕಾರಣ ಗೊತ್ತಿಲ್ಲ. ಅದು ನನಗೆ ಬೇಕಾಗಿಯೂ ಇಲ್ಲ. ಆದರೆ ಬೈಗುಳದಲ್ಲಿ ಎರಡು ಶಬ್ದಗಳು ನನ್ನನ್ನು ಯೋಚನಾಪರನನ್ನಾಗಿಸಿತು. "ಒಪ್ಪಾನೆ ಮತ್ತು ಮೂರು ಕಾಸು".

ಒಂದು, ಎರಡು, ಮೂರು ಇದಕ್ಕೆ ಪ, ಹ ಪರವಾದರೆ ಸಂಧಿಯಲ್ಲಿ ಪ ಕಾರ ಬರುವುದು ವ್ಯಾಕರಣ ನಿಯಮ. ಉದಾ: ಒಂದು +ಹೊತ್ತು - ಒಪ್ಪತ್ತು, ಎರಡು + ಹೊತ್ತು - ಇಪ್ಪತ್ತು , ಮೂರು + ಹತ್ತು - ಮುಪ್ಪತ್ತು (ಮುವ್ವತ್ತು ) ಇತ್ಯಾದಿ. ಹಾಗೆಯೇ ಒಂದು + ಹಾನೆ - ಒಪ್ಪಾನೆ, ಎರಡು + ಹಾನೆ -ಇಪ್ಪಾನೆ, ಮೂರು + ಹಾನೆ - ಮುಪ್ಪಾನೆ. ಇಲ್ಲಿ "ಹಾನೆ" ಎಂಬುದು ಹಿಂದಿನ ಅಳತೆ ಮಾನ.

ಕಾಸು - ಇದು ಕೆಳದಿ ಅರಸರ ಕಾಲದ ನಾಣ್ಯ. ಇದರಲ್ಲಿ ಅರೆಕಾಸು, ಚಿಕ್ಕಾಸು, ಎಂಬೆರಡು ಚಿಕ್ಕ ನಾಣ್ಯಗಳೂ ಇವೆ.               " ನೆರೆಪಾಪಿಯಾದ ಪುಷ್ಕರನೆಲ್ಲಿ ನಾನೆಲ್ಲಿ । ಅರೆಕಾಸಿನವ ಕೊಬ್ಬಿಸಿರಿಕೊಂಡನಲ್ಲ "  (ನಳ ಚರಿತ್ರೆ - ಧ್ವಜಪುರದ ನಾಗಪ್ಪಯ್ಯ - ೧೭ ನೇ ಶತಮಾನ )

ಇದೆಲ್ಲಾ ಸರಿ. ಇವು ಬೈಗುಳವಾಗುವುದು ಹೇಗೆ?

ಒಬ್ಬ ಮನುಷ್ಯನ ಬೆಲೆ ಅಂದರೆ ಕೂಲಿ ನಿರ್ಧರಿಸುವಾಗ ಅವನ ಶಕ್ತಿ, ಅದನ್ನು ಅನುಸರಿಸಿ ಅವನು ಪೂರೈಸಬಹುದಾದ ಕೆಲಸ ಇವುಗಳನ್ನು ಆಧರಿಸಿ ಇರುತ್ತದೆ. ಇಂದಿಗೂ ಮಕ್ಕಳಿಗೂ, ಮುದಕರಿಗೂ, ಯೌವನಸ್ಥರಿಗೂ ಕೂಲಿಯಲ್ಲಿ ವ್ಯತ್ಯಾಸ ಇದೆ ತಾನೆ? ಬತ್ತ, ಅಕ್ಕಿ ಮುಂತಾದ ಧಾನ್ಯವನ್ನು ಕೂಲಿಯಾಗಿ ಕೊಡುತ್ತಿದ್ದಾಗ ಅದನ್ನು ಅಂದು ಹಾನೆಯಲ್ಲಿ ಅಳೆದು ಕೊಡುತ್ತಿದ್ದರು. ಬಹುಶಃ ಅಂದಿನ ಕನಿಷ್ಠ ಕೂಲಿ ಅಂದರೆ ಒಂದು ಹಾನೆ ಬತ್ತ. " ಒಪ್ಪಾನೆ ಬತ್ತದವನು"ಎಂದರೆ ಕನಿಷ್ಠ ಕೂಲಿ ಪಡೆಯುವ ಅಯೋಗ್ಯ ಎಂದಾಗಬಹುದು. ಅದರಂತೆ ಮೂರು ಕಾಸಿನ ಕೆಲಸ ಎಂದರೆ ತೀರಾ ಹಗುರವಾದ ಕೆಲಸ. ಯಾರು ಒಪ್ಪದ ಹೀನ ಕೆಲಸ. ಹಿಂದಿ ಭಾಷೆಯ "ಹಲ್ಕಾ" ಎಂಬ ಪದ ಇದಕ್ಕೆ ಸರಿಯಾಗಬಹುದು.

ಒಂದೇ ಮಾತಿನಲ್ಲಿ - ಒಬ್ಬನನ್ನು ಅಯೋಗ್ಯ, ನೀಚನೆಂದೂ ಅವನು ಮಾಡಿದ ಕೆಲಸ ಹೀನ ಕೆಲಸವೆಂದೂ ಹೇಳುವುದಕ್ಕೆ ಆ ಹಿರಿಯರು " ಒಪ್ಪಾನೆ ಬತ್ತದವನು - ಮೂರು ಕಾಸಿನ ಕೆಲಸ" ಎಂಬ ಅರ್ಥದಲ್ಲಿ ಹೇಳಿರಬೇಕು.

ಇಂದಿಗೂ ಪಾರ್ಲಿಮೆಂಟಿನಲ್ಲಿ ಇದೇ ಅರ್ಥ ಕೊಡುವ "ವಾಗ್ದಂಡನೆ" ಇದೆಯಲ್ಲ.

ಇಷ್ಟು ಅರ್ಥವ್ಯಾಪ್ತಿಯುಳ್ಳ, ಅಶ್ಲೀಲವಲ್ಲದ ಬೈಗುಳ ಇಂದು ಭಾಷೆಯಿಂದ ಮರೆಯಾಗುತ್ತಿರುವುದು ವಿಷಾದಕರ.


ಲೇಖಕರು: ದಿ।। ಜಂಬೆ ಅಚ್ಯುತ ಹೆಬ್ಬಾರರು



Monday, September 22, 2014

ಬಿರಿ ಕುಂಟಿ - ಎತ್ತಿನ ಗಾಡಿಗೊಂದು ಸರಳ ಬ್ರೇಕ್ ವ್ಯವಸ್ಥೆ

ಇಂಟರ್ನೆಟ್ ನಲ್ಲಿ ಬೆಳಗಾವಿಯ ಸಂತೋಷ್ ಕಾವೇರಿ ಅನ್ನುವವರು ಎತ್ತಿನ ಗಾಡಿಗೆ ಬ್ರೇಕ್ ವ್ಯವಸ್ಥೆ ಯನ್ನು ಅಭಿವೃದ್ಧಿಪಡಿಸಿ  ಅಳವಡಿಸಿದ್ದಾರೆ ಎಂಬ ಫೆಬ್ರುವರಿ ೨೦೧೪ ರ ಮಾಹಿತಿ ದೊರಕಿತು.

ಎತ್ತಿನ ಗಾಡಿಗಳು ವರ್ಷಾಂತರಗಳಿಂದ ಇವೆ ಆದರೆ ಗಾಡಿಯನ್ನು ಬೇಕೆಂದಾಗ ನಿಲ್ಲಿಸಲು ಮತ್ತು ಗಾಡಿಯನ್ನು ಲೋಡ್ ಮಾಡುವ ಸಂಧರ್ಭದಲ್ಲಿ ಸಹಾಯ ಮಾಡುವ ಸಮರ್ಥ ಬ್ರೇಕ್ ವ್ಯವಸ್ಥೆ ಇದುವರೆಗೂ ಇರಲಿಲ್ಲ ಅಂತ ತಿಳಿದು ಆಶ್ಚರ್ಯವಾಯ್ತು. ಸಂತೋಷ್ ಕಾವೇರಿ ಅವರ ವಿಡಿಯೋ ಹಾಗು ಈ ಲಿಂಕ್ ನಲ್ಲಿ ತಿಳಿಸಿರುವಂತೆ ಸಧ್ಯಕ್ಕೆ ಗಾಡಿ ಇಳಿಜಾರಿನಲ್ಲಿ ಹೋಗುವಾಗ ಅದರ ಚಕ್ರವನ್ನು ಕೋಲಿನ ಸಹಾಯದಿಂದ ತಡೆಯೊಡ್ಡಿ ವೇಗ ಕಡಿಮೆ ಮಾಡುತ್ತಾರೆ ಮತ್ತು ಗಾಡಿಯನ್ನು ನಿಲ್ಲಿಸಲು ಎತ್ತಿನ ಮೂಗುದಾರವನ್ನು ಹಿಡಿದು ಎಳೆದು ಎತ್ತನ್ನು ನಿಲ್ಲಿಸುತ್ತಾರೆ.  ಇಂಥಹ ವಿಧಾನಗಳ ಅನಾನುಕೂಲಗಳನ್ನು ನಾವೇ ಊಹೆ ಮಾಡಬಹುದು. ಈ ವರೆಗೂ ನಮ್ಮ ರೈತರು ಕಷ್ಟವಾದರೂ ಇಂತಹ  ಕಚ್ಚಾ ವಿಧಾನಗಳನ್ನೇ ಬಳಸುತ್ತಿದ್ದಾರೆ. ಈ ಸಮಸ್ಯೆಯನ್ನು ಗುರುತಿಸಿ ಸೂಕ್ತ ಬ್ರೇಕ್ ವ್ಯವಸ್ಥೆ ಅಭಿವೃದ್ಧಿ ಪಡಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

ಯಾರೂ ಈ ಬಗ್ಗೆ ಯೋಚನೆ ಮಾಡಿಲ್ಲವೆಂದಲ್ಲ. ಕುಂದಾಪುರ ತಾಲ್ಲೂಕಿನ ನಮ್ಮೂರಿನ ಎತ್ತಿನಗಾಡಿಗಳಲ್ಲಿ "ಬಿರಿ ಕುಂಟಿ" ಎಂಬ ಸರಳವಾದ ಅನನ್ಯ ಮಾದರಿಯ ಬ್ರೇಕ್ ವ್ಯವಸ್ಥೆ ಅಳವಡಿಸಿರುತ್ತಾರೆ.

ನಾನು ನೋಡಿದ ಪ್ರಕಾರ ಎತ್ತಿನಗಾಡಿಯು ಸಾಮಾನ್ಯವಾಗಿ ಎರಡು ವಿಧದಲ್ಲಿ ನಿರ್ಮಾಣಗೊಂಡಿರುತ್ತದೆ. ವ್ಯತ್ಯಾಸವಿರುವುದು ಗಾಡಿಗೆ ಅಳವಡಿಸಿರುವ ಚಕ್ರದಲ್ಲಿ. ಒಂದರಲ್ಲಿ ಮರದ ದೊಡ್ಡ ಚಕ್ರ ಅಳವಡಿಸಿದ್ದರೆ ಇನ್ನೊಂದರಲ್ಲಿ ಲಾರಿ ಚಕ್ರ ಅಳವಡಿಸುತ್ತಾರೆ.  ಸಂತೋಷ್ ಕಾವೇರಿಯವರು ಆವಿಷ್ಕರಿಸಿದ ಬ್ರೇಕ್ ವ್ಯವಸ್ಥೆ ಕೇವಲ ಲಾರಿ ಚಕ್ರ ಹೊಂದಿದ ಗಾಡಿಗಳಿಗಾಗಿರಬಹುದು ಎನ್ನಿಸುತ್ತದೆ.

ox cart, bullock cart braking
ನಮ್ಮೂರಿನಲ್ಲಿ ಸಾಧಾರಣವಾಗಿ ಮರದ ಚಕ್ರ ಅಳವಡಿಸಿರುವ ಗಾಡಿಗಳೇ ಕಾಣಸಿಗುತ್ತವೆ. ಈ ಮರದ ಚಕ್ರದ ಹಿಂಬದಿಯಲ್ಲಿ ದೊಡ್ಡದಾದ ಮರದ ದಿಮ್ಮಿ (ಕುಂಟಿ)ಯನ್ನು ಗಾಡಿಯ ಚೌಕಟ್ಟಿಗೆ ಕಟ್ಟಿದ ಹಗ್ಗದಿಂದ ಜೋತು ಬಿಟ್ಟಿರುತ್ತಾರೆ. ಇನ್ನೆರಡು ಹಗ್ಗಗಳನ್ನು ಈ ಮರದ ದಿಮ್ಮಿಯಿಂದ ಚಾಲಕನ ಕಾಲಿನಡಿಯ ಮೂಲಕವಾಗಿ ಗಾಡಿಯ ಮುಂಭಾಗಕ್ಕೆ ಕಟ್ಟಿರುತ್ತಾರೆ. ಚಾಲಕ ತನ್ನ ಕಾಲಿನಿಂದ ಹಗ್ಗವನ್ನು ಒತ್ತಿದಾಗ, ಚಕ್ರದ ಹಿಂದೆ ಕಟ್ಟಿರುವ ಮರದ ದಿಮ್ಮಿ ಮುಂದೆ ಬಂದು ಚಕ್ರದ ಅಂಚಿಗೆ ತಾಗುತ್ತದೆ. ಈ ಘರ್ಷಣೆ ಯಿಂದ ಗಾಡಿಯ ಗತಿ ನಿಧಾನಿಸುತ್ತದೆ. ಚಾಲಕ ಎಷ್ಟು ಗಟ್ಟಿಯಾಗಿ ಹಗ್ಗವನ್ನು ಒತ್ತುತ್ತಾನೋ ಅಷ್ಟೇ ಮಟ್ಟದಲ್ಲಿ ಗಾಡಿಯ ವೇಗ ನಿಯಂತ್ರಣಗೊಳ್ಳುತ್ತದೆ. ಈ ಸರಳವಾದ ಬ್ರೇಕ್ ವ್ಯವಸ್ಥೆ ಸಮರ್ಥವಾಗಿದೆ ಮತ್ತು ಅತೀ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾಗಿದೆ. 
Bullock cart brake, braking
ಮರದ ದಿಮ್ಮಿಯು ಚಕ್ರಕ್ಕೆ ಉಜ್ಜಿ ಕ್ರಮೇಣ ಆ ಜಾಗದ ಪದರಗಳು ನಶಿಸಿ ಚಕ್ರದ ಅಗಲದಷ್ಟು ಗುರುತಾಗಿರುವುದನ್ನು ನೋಡಿದ್ದೇನೆ. ಈ ಬ್ರೇಕ್ ಕೇವಲ ಮರದ ಚಕ್ರದ ಹೊಂದಿದ ಗಾಡಿಗಳಿಗೆ ಅಳವಡಿಸಬಹುದಾಗಿದೆ. 

ಬಿರಿ ಕುಂಟಿಯು ಹೇಗೆ ಕಾರ್ಯ ಮಾಡುತ್ತದೆ ಎಂದು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಕೆಳಗೆ ನೀಡಿರುವ ಚಿಕ್ಕ ವೀಡಿಯೊವನ್ನು ವೀಕ್ಷಿಸಿ. 






ನಾನು ಮೊದಲು ಈ ತರದ ಬ್ರೇಕ್ ವ್ಯವಸ್ಥೆ ಎಲ್ಲ ಕಡೆಯ ಮರದ ಚಕ್ರದ ಗಾಡಿಗಳಲ್ಲೂ ಇದೆ ಅಂತ ತಿಳಿದಿದ್ದೆ.  ಆದರೆ ಈಗ ಎಲ್ಲ ಕಡೆಯಲ್ಲಿಯೂ ಈ ಸರಳ ಬ್ರೇಕ್ ವ್ಯವಸ್ಥೆಯ ಅರಿವು ಇಲ್ಲ ಅಂತ ಅನ್ನಿಸುತ್ತ ಇದೆ. 

ನಿಮ್ಮ ಕಡೆ ಏನಾದ್ರೂ ಈ ತರ ಸರಳವಾದ ಐಡಿಯಾಗಳಿಂದ ತಮ್ಮ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಂಡು ಉಪಯೋಗಿಸ್ತಾ ಇದ್ದರೆ ಕಾಮೆಂಟ್ನಲ್ಲಿ ತಿಳಿಸಿ.  ಈ ಸರಳ ಬ್ರೇಕ್ ವ್ಯವಸ್ಥೆಯ ಮಾಹಿತಿಯನ್ನು ಇತರರೊಂದಿಗೂ ಹಂಚಿಕೊಳ್ಳಿ (ಶೇರ್ ಮಾಡಿ)


*********************************************
ಗಾಡಿಯ ಚಿತ್ರಗಳು ಮತ್ತು ವೀಡಿಯೊವನ್ನು ಒದಗಿಸಿದ ವೇಣುಗೋಪಾಲ್ ಜೆ. ಹೆಚ್ ಅವರಿಗೆ ವಂದನೆಗಳು. 

ದೇವರ ಹೆಸರನ್ನೂ ಬದಲಾಯಿಸಬಹುದೇ?

ಈ ವರ್ಷದ ಗಣೇಶ ಚತುರ್ಥಿಗೆ ಊರಿಗೆ ಹೋದಾಗ ನನಗೊಂದು ಅಚ್ಚರಿ ಕಾದಿತ್ತು. ನಮ್ಮೂರಿನ ಗಣಪತಿ ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಯುವ ಸಾರ್ವಜನಿಕ ಗಣೇಶೋತ್ಸವದ ಆಹ್ವಾನ ಪತ್ರಿಕೆ ನಮ್ಮನೆಗೂ ಬಂದಿತ್ತು. ಆದರೆ ಈ ಬಾರಿಯ ಆಹ್ವಾನ ಪತ್ರಿಕೆಯಲ್ಲಿ ದೇವಸ್ಥಾನದ ಹೆಸರು "ಶ್ರೀ ಲಕ್ಷ್ಮೀಗಣಪತಿ ದೇವಾಲಯ" ಎಂದಿತ್ತು. ಇದನ್ನು ನೋಡಿ ಇದು ನಮ್ಮದೇ ದೇವಸ್ಥಾನದ್ದ ಅಂತ ಅನುಮಾನವಾಯಿತು. ಚಿಕ್ಕಪ್ಪನ ಮಗನ ಹತ್ತಿರ ಕೇಳಿ ಇನ್ನೊಮ್ಮೆ ಖಾತರಿ ಪಡಿಸಿಕೊಂಡೆ. ಹೌದು, ಇದು ಮಹಾಗಣಪತಿ ದೇವಸ್ಥಾನ ಎಂದು ಕರೆಸಿಕೊಳ್ಳುತ್ತಿದ್ದ ನಮ್ಮೂರ ದೇವಸ್ಥಾನದ್ದೆ. ನಾನು ಹುಟ್ಟಿದಾಗಿಂದಲೂ ಅಥವಾ ಅದಕ್ಕಿಂತಲೂ ಬಹಳ ಹಿಂದಿನಿಂದಲೂ ನಮ್ಮೂರ ದೇವಸ್ಥಾನದ ಹೆಸರು ಮಹಾಗಣಪತಿ ದೇವಸ್ಥಾನ, ಮಟ್ನಕಟ್ಟೆ ಎಂದಾಗಿದೆ. ನಿಸ್ಸಂದೇಹವಾಗಿ "ಮಹಾಗಣಪತಿ" ದೇವರ ದೇವಸ್ಥಾನವಾದ್ದರಿಂದ  ಆ ಹೆಸರು.  ನಾನು ನಂಬಿಕೊಂಡು ಬಂದ ಮಹಾಗಣಪತಿ ದೇವರ ಹೆಸರು ಒಮ್ಮೆಲೇ "ಶ್ರೀ ಲಕ್ಷ್ಮೀಗಣಪತಿ" ಎಂದಾಗಿದೆ ಎಂಬ ವಿಷಯವನ್ನು ಅರಗಿಸಿಕೊಳ್ಳಲಾಗಲಿಲ್ಲ.

ಚಿಕ್ಕಂದಿನಿಂದಲೂ ನನಗೆ ದೇವರನ್ನು ನೆನಪಿಸಿಕೊಬೇಕೆನಿಸಿದಾಗೆಲ್ಲ ಮೊದಲು ಬಾಯಿಗೆ ಬರುವುದು ಮಹಾಗಣಪತಿ ಎಂದು. ಬೆಳಿಗ್ಗೆ ಎದ್ದ ಕೂಡಲೇ ಅಥವಾ ಯಾವುದೇ ಮುಖ್ಯ ಕಾರ್ಯಕ್ಕೆ ತೊಡಗುವ ಮೊದಲು ಆ ಮಹಾಗಣಪತಿಯ ಹೆಸರು ಹೇಳಿ ಸ್ಮರಿಸುತ್ತೇನೆ. ಈಗ ನಾನು ಹೊತ್ತಿಗೂ ಸ್ಮರಿಸಿಕೊಳ್ಳುವ ಮಹಾಗಣಪತಿ ಎಂಬ ದೇವರ ನಾಮ ಅಸ್ತಿತ್ವ ದಲ್ಲಿಯೇ ಇರಲಿಲ್ಲ.

ಮಟ್ನಕಟ್ಟೆಯಲ್ಲಿರುವ ದೇವರ ಮೂರ್ತಿಯು ದಶಭುಜಗಳನ್ನು ಹೊಂದಿರುವ ಗಣಪತಿ ವಿಗ್ರಹವಾಗಿದೆ. ಮೂರ್ತಿಯ ಎಡ ತೊಡೆಯ ಮೇಲೆ ಲಕ್ಷ್ಮಿ ಆಸೀನಳಾಗಿದ್ದಾಳೆ.  ಮೂಲ ಮೂರ್ತಿಯು ಪಂಚಲೋಹದ್ದಾಗಿದೆ. ದಶಭುಜಗಳಲ್ಲಿಯೂ ವಿವಿದ ಆಯುಧಗಳನ್ನು ಹಿಡಿದುಕೊಂಡಿದೆ. ನಾನು ಈ ರೀತಿಯಲ್ಲಿರುವ ಎಲ್ಲ ಗಣಪತಿ ಮೂರ್ತಿಯನ್ನು "ಮಹಾಗಣಪತಿ" ಎಂದು ಕರೆಯುತ್ತಾರೆ ಎಂದೆಣಿಸಿಕೊಂಡಿದ್ದೆ. ಬೆಂಗಳೂರಿನ ರಾಗಿಗುಡ್ಡ ದೇವಸ್ಥಾನದಲ್ಲಿರುವ ಗಣಪತಿ ಮೂರ್ತಿಯೂ ಇದೇ ರೀತಿಯಲ್ಲಿದೆ ಮಾತ್ರವಲ್ಲ "ಮಹಾಗಣಪತಿ" ಎಂದೇ ಕರೆಯುತ್ತಾರೆ. ಇದನ್ನು ನೋಡಿದ ಮೇಲಂತೂ ಮಹಾಗಣಪತಿ ಎಂದರೆ ಇದೇ ರೀತಿಯಿರುತ್ತದೆ ಎಂದು ನನಗೆ ಖಚಿತವಾಗಿತ್ತು.

ನಮ್ಮೂರಿನ  ದೇವಸ್ಥಾನದ ಆಡಳಿತ ಮಂಡಳಿ ಇತ್ತೀಚಿಗೆ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಂಡಿದೆ. ದೇವಸ್ಥಾನದ ಗರ್ಭಗುಡಿಯನ್ನು ಸಂಪೂರ್ಣ ಶಿಲಾಮಯವಾಗಿಸುವುದು ಮತ್ತು ಸುತ್ತಲೂ ಪೌಳಿಯನ್ನು ನಿರ್ಮಿಸುವುದು ಇವರ ಯೋಜನೆ. ದೇವಸ್ಥಾನದ ಜೀರ್ಣೋದ್ಧಾರ ಕೆಲಸವನ್ನು ಕೈಗೆತ್ತಿಕೊಂಡಾಗ ಮೊದಲು ಮಾಡುವ ಕೆಲಸವೆಂದರೆ ಅಷ್ಟಮಂಗಲ ಅಥವಾ ಆರೂಢ ಪ್ರಶ್ನೆ ಇಟ್ಟು ದೇವಸ್ಥಾನದ ಮೂಲ, ದೈವೀಕ ಶಕ್ತಿ ಮುಂತಾದ ಹಲವು ವಿಷಯಗಳ ಬಗ್ಗೆ ತಿಳಿದು ಅದರಂತೆ ನೆಡಿಯುವುದು ಕ್ರಮ.  ಹಾಗೆ ನಮ್ಮೂರ ದೇವಸ್ಥಾನದಲ್ಲೂ ಆರೂಢ ಪ್ರಶ್ನೆ ನಡೆದಿತ್ತು.

ಸಾರ್ವಜನಿಕ ಗಣೇಶೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಸಾರ್ವಜನಿಕರಿಗೆ ಮಾಡಿದ ವಿಜ್ಞಾಪನೆಯ ಪ್ರಕಾರ ಜೀರ್ಣೋದ್ಧಾರಕ್ಕೆ ಮುನ್ನ ನಡೆದ ಆರೂಢ ಪ್ರಶ್ನೆಯಲ್ಲಿ ಮಟ್ನಕಟ್ಟೆಯಲ್ಲಿರುವ ದೇವರ ಹೆಸರು "ಲಕ್ಷ್ಮೀಗಣಪತಿ" ಎಂಬುದಾಗಿ ತಿಳಿದು ಬಂದಿದೆ ಹಾಗೂ ಅದರಂತೆ ದೇವಾಲಯದ ಹೆಸರನ್ನು "ಶ್ರೀ ಲಕ್ಷ್ಮೀಗಣಪತಿ ದೇವಾಲಯ" ಎಂದು ಮರು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದ್ದರು.

ವಿಜ್ಞಾಪನೆಯಲ್ಲಿ ತಿಳಿಸಿರುವಂತೆ ಕೇವಲ ಆರೂಢ ಪ್ರಶ್ನೆಯ ಆಧಾರದ ಮೇಲೆ ಈ ಮರುನಾಮಕರಣ ನಡೆದಿಲ್ಲವೆಂದು ನನಗನ್ನಿಸುತ್ತದೆ. ಲಕ್ಷಿ ಎಂಬುದು ಧನ ಕನಕ ಐಶ್ವರ್ಯಾದಿಗಳನ್ನು ನೀಡುವ ದೇವತೆ. ಎಲ್ಲದಕ್ಕಿಂತಲೂ ಹಣವೇ ಮೇಲು, ದುಡ್ಡಿದ್ದರೆ ಎಲ್ಲ ಇದ್ದಂತೆ ಎಂಬ ವಿಚಾರ ದಿನದಿಂದ ದಿನಕ್ಕೆ ದೃಢಗೊಳ್ಳುತ್ತಿರುವ ಇಂದಿನ ಸಮಾಜದಲ್ಲಿ ಐಶ್ವರ್ಯ ನೀಡುವ ಲಕ್ಷ್ಮಿಗೆ ಬೇಡಿಕೆ ಇರುವುದಂತೂ ಖಂಡಿತ.  ಆದ್ದರಿಂದ ಮಹಾಗಣಪತಿಯನ್ನು ಲಕ್ಷ್ಮೀಗಣಪತಿ ಎಂದು ಹೆಸರಿಸಿದರೆ ಭಕ್ತರ ಸಂಖ್ಯೆ ಹಾಗೆ ದೇವಳದ ಆದಾಯವನ್ನು ಹೆಚ್ಚಿಸಬಹುದೆಂಬುದು ಆಡಳಿತ ಮಂಡಳಿಯ ನಿರೀಕ್ಷೆಯಾಗಿರಬಹುದು. ಹೇಗಿದ್ದರೂ ಲಕ್ಷ್ಮೀ ಕೂಡ ಇದೆಯಲ್ಲಾ!

ಜನರ ಹೆಸರನ್ನು ಬದಲಿಸಬೇಕಾದರೆ ಅದೇನೇನೋ ಕಾನೂನು ಕ್ರಮಗಳನ್ನು ಅನುಸರಿಸಬೇಕು ಹಾಗಿದ್ದರೆ ದೇವರ ಹೆಸರನ್ನು ಬದಲು ಮಾಡಲು ಯಾವುದೇ ಸರ್ಕಾರಿ ಅಥವಾ ಕಾನೂನು ನಿಯಮಗಳಿಲ್ಲವೇ? ಗೊತ್ತಿಲ್ಲ. ಮಟ್ನಕಟ್ಟೆ ಮಹಾಗಣಪತಿ ದೇವಸ್ಥಾನ ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ (ಮುಜರಾಯಿ) ಸೇರಿದೆ. ಈ ದೇವಾಲಯದ ಆಡಳಿತ ಮೊಕ್ತೇಸರರು  ನನ್ನ ಚಿಕ್ಕಪ್ಪನವರಾಗಿದ್ದರೆ. ಅವರಲ್ಲಿ ನಾನು ಈ ವಿಚಾರವನ್ನು ಕೇಳಿದೆ. ಧಾರ್ಮಿಕ ದತ್ತಿ ಇಲಾಖೆಯಲ್ಲಿ ಮಟ್ನಕಟ್ಟೆ ದೇವಸ್ಥಾನವು ವಿನಾಯಕ ದೇವಸ್ಥಾನವೆಂದು ನೊಂದಣಿಗೊಂಡಿದೆಎಂದರು. ಅಬ್ಬ! ಮತ್ತೊಂದು ಹೆಸರು. ಅಧಿಕೃತವಾಗಿ ದೇವರ ಹೆಸರನ್ನು ಬದಲಾವಣೆ ಮಾಡುವ ಬಗ್ಗೆ ಅವರಲ್ಲಿ ಮಾಹಿತಿ ಇರಲಿಲ್ಲ.

ಆಶ್ಚರ್ಯವೆಂದರೆ "ಶ್ರೀ ಲಕ್ಷ್ಮೀಗಣಪತಿ" ಎಂಬ ಮರುನಾಮಕರಣದ  ಬಗ್ಗೆ ಆಡಳಿತ ಮೊಕ್ತೇಸರರಾದ ನಮ್ಮ ಚಿಕ್ಕಪ್ಪನವರಿಗೆ ತಿಳಿದಿರಲಿಲ್ಲ . ಇದು ಹೇಗೆ ಸಾಧ್ಯ?  ದೇವಾಲಯದ ಆಡಳಿತ ಮಂಡಳಿ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ಬೇರೆ ಬೇರೆ. ಕೆಲವರು ಎರಡರಲ್ಲೂ ಇದ್ದಾರೆ. ಚಿಕ್ಕಪ್ಪನವರು ಗಣೇಶೋತ್ಸವ ಸಮಿತಿಯಲ್ಲಿಲ್ಲ . ಸಮಿತಿಯವರು ಚೌತಿಗೆ ಮುನ್ನ ಕರೆದ ಸಭೆಯಲ್ಲಿ ನಮ್ಮ ಚಿಕ್ಕಪ್ಪ ಕಾರಣಾಂತರಗಳಿಂದ ಭಾಗವಹಿಸಿರಲಿಲ್ಲ. ಇದೇ ಸಭೆಯಲ್ಲಿ ಮರುನಾಮಕರಣದ ನಿರ್ಣಯವನ್ನು ತೆಗೆದುಕೊಂಡು ಅದರಂತೆ ಆಹ್ವಾನ ಪತ್ರಿಕೆಯನ್ನೂ ಮುದ್ರಿಸಿದ್ದರು.

ಸಹಜವಾಗಿಯೇ ವಿಷಯ ತಿಳಿದ ನಮ್ಮ ಚಿಕ್ಕಪ್ಪ ನನ್ನಂತೆ ಚಕಿತರಾಗಿದ್ದರು. ಅವರು ಮರುನಾಮಕರಣಕ್ಕೆ ವಿರೋಧ ವ್ಯಕ್ತ ಪಡಿಸಿ, ವಿದ್ವಾಂಸರ ಅಭಿಪ್ರಾಯ ಪಡೆದು ಹೀಗೆ ಮರುನಾಮಕರಣ ಮಾಡುವುದು ಸರಿಯಲ್ಲ ಎಂದು ಚೌತಿಯ ನಂತರ ಮತ್ತೊಂದು ಸಭೆಯನ್ನು ಕರೆದು ಮರುನಾಮಕರಣವನ್ನು ಕೈಬಿಟ್ಟರು. ಇದಕ್ಕೆ ದೇವಾಲಯದ ಅರ್ಚಕರ ಬೆಂಬಲವೂ ಅವರಿಗೆ ದೊರಕಿತ್ತು.

ಇನ್ನು ಧಾರ್ಮಿಕ ದತ್ತಿ ಇಲಾಖೆಯಲ್ಲಿ ನೊಂದಯಿತವಾದ ವಿನಾಯಕ ದೇವಸ್ಥಾನ ಎಂಬ ಹೆಸರಿನ ವಿಚಾರ. ನಾನು ಬೆಂಗಳೂರಿಗೆ ಬಂದ ನಂತರ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ವೆಬ್ ಸೈಟ್ ನಲ್ಲಿ ಕೊಟ್ಟಿರುವ ಸುಮಾರು ೩೫೦೦೦ ದೇವಸ್ಥಾನಗಳ ಪಟ್ಟಿಯಲ್ಲಿ ನಮ್ಮ ದೇವಸ್ಥಾನದ ಮಾಹಿತಿ ಹುಡುಕಿದೆ. ಅದರಲ್ಲಿ ಮಹಾಗಣಪತಿ ದೇವಸ್ಥಾನ ಎಂದೇ ಇದೆ. ಮಟ್ನಕಟ್ಟೆ ಎನ್ನುವ ಬದಲು ಮಾತಿನಕಟ್ಟೆ ಎಂದಾಗಿದೆ ಅಷ್ಟೇ.

ಕೊನೆಗೂ ನಾನು ನಂಬಿಕೊಂಡು ಬಂದಿರುವ ಮಹಾಗಣಪತಿ, ಮಹಾಗಣಪತಿಯೆಂದೇ  ಉಳಿದು ಕೊಂಡಿರುವುದು ಸಂತಸದ ಸಂಗತಿ . ಇಲ್ಲಾಂದ್ರೆ ಮಹಾಗಣಪತಿ ಎಂದು ನಾನು ಸ್ಮರಿಸುವ ಅಭ್ಯಾಸವನ್ನು ಬದಲು ಮಾಡಿಕೊಳ್ಳಲು ಎಂದಿಗೂ ಸಾಧ್ಯವಾಗುತ್ತಿರಲಿಲ್ಲ. ಒಂದು ವೇಳೆ ದೇವರ ಹೆಸರನ್ನು ಬದಲಾಯಿಸಿದ್ದರೆ ನಾನು ಸ್ಮರಿಸುವ " ಮಹಾಗಣಪತಿ" ಎಂಬ ನಾಮ ನನ್ನ ಮನಸಿನ್ನಲ್ಲಿರುವ ಮಟ್ನಕಟ್ಟೆ ಮಹಾಗಣಪತಿಗೆ ಸಲ್ಲುವುದಿಲ್ಲವೇನೋ ಎಂಬ ಕೊರಗು ಸದಾ ಇರುತ್ತಿತ್ತು. 

ದೇವರಿಗೆ ಸಹಸ್ರಾರು ನಾಮಗಳಿರುವುದು ಸಹಜ ಆದರೆ ನಮ್ಮ ಮನಸ್ಸಿನಲ್ಲಿರುವ ದೇವರು ಒಂದು ವಿಗ್ರಹ, ಚಿತ್ರ ಅಥವಾ ಇನ್ನಾವುದೋ ದೈಹಿಕ ಸ್ವರೂಪ ಪಡೆದಾಗ ಆ ನಿರ್ಧಿಷ್ಟ ರೂಪದ ದೇವರು ಒಂದೇ ಹೆಸರಿನಿಂದ ಕರೆಯಿಸಿಕೊಳ್ಳುತ್ತದೆ . ಉದಾಹರಣೆಗೆ ಕೊಲ್ಲೂರ ಮೂಕಾಂಬಿಕೆ, ಧರ್ಮಸ್ಥಳದ ಮಂಜುನಾಥ ಅಥವಾ ಕಾಶಿ ವಿಶ್ವನಾಥ ಹೀಗೆ. ಮಂಜುನಾಥ ಮತ್ತು ವಿಶ್ವನಾಥ ಎರಡೂ ಶಿವನ ನಾಮವಾದರೂ ಧರ್ಮಸ್ಥಳದಲ್ಲಿರುವ ದೇವರು ವಿಶ್ವನಾಥ ನಾಗಲಾರದು ಹಾಗೆ ಕಾಶಿಯಲ್ಲಿರುವ ದೇವರು ಮಂಜುನಾಥನೆನಿಸಿಕೊಳ್ಳದು. ಈ ಎರಡೂ ದೇವಾಲಯಗಳು ಶಿವನದ್ದೆ ಆದರೂ ಇದನ್ನು ನಂಬಿಕೊಳ್ಳುವ ಭಕ್ತರು ಬೇರೆ ಬೇರೆ. 

ಈ ರೀತಿ ಒಂದು ಮೂರ್ತಿ ಸ್ವರೂಪದಲ್ಲಿರುವ ದೇವರ ಹೆಸರನ್ನೇ ಬದಲಿಸಬಹುದೇ ? ಬದಲಿಸಬಹುದಾದರೆ ವರ್ಷಾಂತರಗಳಿಂದ ನಂಬಿಕೊಂಡು ಬಂದಿರುವ ಭಕ್ತರ ಮನಸ್ಸಿನಲ್ಲಾಗುವ ಪರಿಣಾಮಗಳೇನು? ಆ ಭಕ್ತರ ನಂಬಿಕೆಯ ಪಾಡೇನು?

 "ನಂಬಿಕೆಯೇ ದೇವರು"  ಎಂಬ ಮಾತು ಎಷ್ಟು ಸಮಂಜಸವಾಗಿದೆ ಎನ್ನಿಸುತ್ತಿದೆ .

**************************************************
http://karnatakatemples.kar.nic.in/homepage/index.jsp

Name of revenue district: Udupi
Name of the taluk: Kundapura
Name of Village: Kergalu
Sl. no. of Institution: 249
Name of the Hindu Religious Institutions and Charitable Instituions: Maathinakatte Mahaganapathi Devasthna