Thursday, June 2, 2016

ಹೀಗೊಂದು ವಿಂಧ್ಯಾಚಲ ಯಾತ್ರೆ

ನನ್ನ ವೃತ್ತಿಯ ಕಾರಣ ಆಗಾಗ ವಾರಣಾಸಿ ಮತ್ತು ಉತ್ತರ ಪ್ರದೇಶ ರಾಜ್ಯದ ಪೂರ್ವ ಭಾಗದ ಕೆಲವು ಪಟ್ಟಣಗಳಿಗೆ ಭೇಟಿ ನೀಡುವ ಅವಕಾಶ ಸಿಕ್ಕಿದೆ. ವಾರಣಾಸಿ ಎಲ್ಲರಿಗೂ ತಿಳಿಸಿರುವಂತೆ ಪವಿತ್ರ ಯಾತ್ರಾ ಸ್ಥಳ. ದಕ್ಷಿಣ ಭಾರತೀಯರಿಗೆ ಕಾಶಿ ಎಂದು ಚಿರ ಪರಿಚಿತ. ವಾರಣಾಸಿಯಿಂದ 65 ಕಿ. ಮೀ ದೂರದಲ್ಲಿರುವ ವಿಂಧ್ಯಾಚಲ ವಿಂಧ್ಯವಾಸಿನಿ ಮಾತೆಯ ಮಂದಿರವೂ ಕೂಡ ಪ್ರಸಿದ್ಧವಾದ ಉತ್ತರ ಭಾರತೀಯ ಯಾತ್ರಾ ಸ್ಥಳ.  

ಮಿರ್ಜಾಪುರ ಮತ್ತು ವಿಂದ್ಯಾಚಲ
ಮಿರ್ಜಾಪುರ, ವಾರಣಾಸಿಗೆ ತಾಗಿಯೇ ಇರುವ ಒಂದು ಜಿಲ್ಲೆ. ಈ ಜಿಲ್ಲೆಯ ಮುಖ್ಯ ಪಟ್ಟಣವೇ ಮಿರ್ಜಾಪುರ. ಗಂಗಾ ತೀರದಲ್ಲಿರುವ ಈ ಪಟ್ಟಣಕ್ಕೆ ಹೊಂದಿಕೊಂಡೇ ವಿಂದ್ಯಾಚಲವೆಂಬ ಈ ಜನಪ್ರಿಯ ಪುಣ್ಯ ಕ್ಷೇತ್ರ ಇದೆ. ಈ ಕಾರಣದಿಂದ ಗೂಗಲ್ ಮ್ಯಾಪ್ ನಲ್ಲಿ ‘ಮಿರ್ಜಾಪುರ ಕಮ್ ವಿಂದ್ಯಾಚಲ’ ವೆಂದು ತೋರಿಸುತ್ತದೆ.

ಈ ಪುಣ್ಯ ಕ್ಷೇತ್ರದ ಬಗ್ಗೆ ಮಿರ್ಜಾಪುರಕ್ಕೆ ತೆರಳುವ ಮುನ್ನವೂ ತಿಳಿದಿರಲಿಲ್ಲ. ಮಿರ್ಜಾಪುರದಿಂದ ಕೇವಲ 5 ಕಿ. ಮೀ‌ ದೂರದಲ್ಲಿರುವ ಈ ಕ್ಷೇತ್ರದ ಬಗ್ಗೆ ನನ್ನ ಕ್ಯಾಬ್ ಚಾಲಕ, ಸಂದೀಪ್ ಹೇಳಿದಾಗಲೂ ನನಗೆ ಅಷ್ಟೊಂದು ಉತ್ಸಾಹ ಬರಲಿಲ್ಲ. ಸಣ್ಣ ಒಂದು‌ ಕ್ಷೇತ್ರವಾಗಿರಬೇಕೆಂದುಕೊಂಡೆ. ಮಿರ್ಜಾಪುರದಲ್ಲಿನ ಕೆಲಸ‌ ಬೇಗನೆ ಮುಗಿದಾಗ, ನೋಡಿಯೇ ಬಿಡೋಣ ಎಂದು ವಿಂದ್ಯಾಚಲಕ್ಕೆ ತೆರಳಲು ಸಂದೀಪನಿಗೆ ಹಸಿರು ನಿಶಾನೆ ತೋರಿಸಿದೆ.


ತಾಪ ತಾಂಡವ 
ಏಪ್ರಿಲ್ ತಿಂಗಳಿನ ಉರಿ ಬಿಸಿಲಿನಲ್ಲಿ ಸುತ್ತಾಡುವುದೇ ಪ್ರಾಣ ಸಂಕಟವಾಗಿತ್ತು. ಮಧ್ಯಾಹ್ನದ ವೇಳೆಯಲ್ಲಿ ಉಷ್ಣಾಂಶ ೪೩ಕ್ಕೆ ಏರಿತ್ತು. ಬೀಸುವ ಬಿಸಿ ಗಾಳಿಯು ‌ಚರ್ಮವನ್ನು ಸುಡುತ್ತಿತ್ತು. ತಲೆಯ ಮೇಲೆ ಬಟ್ಟೆ (ಇಲ್ಲಿ ಈ ಬಟ್ಟೆಗೆ ಗಮ್ ಚಾ ಎನ್ನುತ್ತಾರೆ) ಹಾಕಿಕೊಳ್ಳದೇ ಬಿಸಿಲಿನಲ್ಲಿ ‌ನೆಡೆದರೆ, ತಲೆಯೇ‌ ಕರಗಿ ಹೋದಂತೆ ಭಾಸವಾಗುತ್ತಿತ್ತು. ನೀರು ಮತ್ತು ಇತರ ಪಾನೀಯಗಳನ್ನು ಕುಡಿದಷ್ಟೂ , ಇನ್ನು ಕುಡಿಯಬೇಕೆನಿಸುತ್ತಿತ್ತು. 30-50 ಮೀಟರ್ ಈ ಉರಿಯುವ ಬಾಣಲೆಯಲ್ಲಿ‌ ನೆಡೆದರೂ  ೧೫೦೦  ಮೀಟರು ರೇಸ್ ಪ್ರಾಮಾಣಿಕವಾಗಿ ಓಡಿದಷ್ಟು ಸುಸ್ತಾಗುತ್ತಿತ್ತು. ರಕ್ತಹೀರಿದಂತಾಗಿ, ತಲೆ‌ ಸಿಡಿಯುತ್ತಿತ್ತು. ನೆಡೆದು ಸುಸ್ತಾಗಿ ಕಾರಿನಲ್ಲಿ‌ ಓಡಿಬಂದು ಕೂತರೆ, ಪಾರ್ಕ್‌ ಮಾಡಿದ ಕಾರು ಇನ್ನೂ‌ ಬಿಸಿ. ಕಾರಿನ ಎಸಿ ಯಾವ ಲೆಕ್ಕಕ್ಕೂ‌ಇಲ್ಲ. ಎಸಿ ಬ್ಲೋವರ್ 4 ರಲ್ಲಿ‌ ಇಟ್ಟರೂ ಬಿಸಿ ಗಾಳಿಯೆ. ಆದರೂ ಅಲ್ಲಿಯ ಜನ ಗಮ್ ಚಾ ತಲೆ‌ ಮುಖಕ್ಕೆ ಸುತ್ತಿಕೊಂಡು ತಮ್ಮ ಕೆಲಸದಲ್ಲಿ ‌ನಿರತರಾಗಿದ್ದರು.

ಇಂತಹ ಬಿಸಿಲಿನ ಬೇಗೆಯಲ್ಲಿ ವಿಂದ್ಯಾಚಲ ತಲುಪಿದೆ. ಇಲ್ಲಿಂದ ವಿಂದ್ಯವಾಸಿನಿ ಮಾ ಇರುವ ದೇವಸ್ಥಾನಕ್ಕೆ‌‌ ಹೋಗಲು ಸುಮಾರು 150 ಮೀಟರ್ ಏರು ಹತ್ತಿಹೋಗಬೇಕು. ಈ ದಾರಿಯ ಎರಡೂ ಬದಿಗಳಲ್ಲಿ ಅಂಗಡಿಗಳ ಸಾಲು. ಹೆಚ್ಚಿನ ಅಂಗಡಿಗಳಲ್ಲಿ ವಿಧ ವಿಧವಾದ ಗಮ್ ಚಾ ದೊರೆಯುತ್ತವೆ. ದೇವಿಗೆ ಬಟ್ಟೆ ಯನ್ನು(ಚುನರಿ) ಅರ್ಪಿಸುವುದು ಇಲ್ಲಿನ ವಿಶೇಷ. ಅಂಗಡಿಗಳ ತಾತ್ಕಾಲಿಕ ಮಾಡಿನಿಂದಾಗಿ ನೆಡೆಯುವ ಹಾದಿಯುದ್ದಕ್ಕೂ ನೆರಳಿದೆ. ಇನ್ನೇನು ತಲುಪುತ್ತೇವೆ‌ ಎನ್ನುವಷ್ಟರಲ್ಲಿ‌, ಅಂಗಡಿಯ ಜನರು ಚಪ್ಪಲಿ‌ ತಮ್ಮ ಅಂಗಡಿಯಲ್ಲೇ ಬಿಡುವಂತೆ‌‌ ಪೀಡಿಸುತ್ತಾರೆ. ಚಪ್ಪಲಿ ಬಿಟ್ಟಿದ್ದಕ್ಕೆ ಹಣ ಕೊಡಬೇಕಾಗಿಲ್ಲ ಆದರೆ ದೇವಿಗೆ ಸಮರ್ಪಿಸಬಹುದಾದಂತ ಚುನರಿ, ಹಣ್ಣು, ಕಾಯಿ, ಬಾಗಿನ  ಹಾಗು ಇನ್ನಿತರ ಸಾಮಾನುಗಳನ್ನು ಆತನಲ್ಲಿಯೇ ಕೊಳ್ಳಬೇಕು. ಆತನಲ್ಲಿ ಇಂತಹ ಸಾಮಾನುಗಳ ಸೆಟ್ ರೆಡಿ ಇರುತ್ತದೆ. ನಾನು ಮೊದಲನೆ ಸಲ ಹೋಗುತ್ತಿರುವದರಿಂದ ಅವರ ಉರುಳಿಗೆ ಸಿಲುಕಿದೆ. ಶೂ ಬಿಡಲು ಮುಂದೆ ವ್ಯವಸ್ಥೆ ಇರಲಾರದೆಂದು, ಒಂದು ಅಂಗಡಿಯಲ್ಲಿ ಶೂ ಬಿಚ್ಚಿದೆ. ಆತ ಕೈ ತೊಳೆಯಲು ನೀರನ್ನು ನೀಡಿ, ನನ್ನ ಕೈ ಗೆ ಸೆಟ್ ಇಟ್ಟು 101 ರೂಪಾಯಿ ಬರ್ತಾ ಕೊಟ್ಟು ಬಿಡಿ‌ ಎಂದ. 1-2 ರೂಪಾಯಿಯಲ್ಲಿ‌  ಆಗುವ ಕೆಲಸಕ್ಕೆ 1೦1 ರೂಪಾಯಿ ತೆರಬೇಕಾಯ್ತು. 

ದರ್ಶನವೆಂಬ ಬಿಸಿನೆಸ್ 
ಪ್ರಸಾದದ ಸೆಟ್ ಹಿಡಿದು ದೇವಸ್ಥಾನದ ಮೆಟ್ಟಿಲು ಏರುತ್ತಿರುವಂತೆ ಇಬ್ಬರು ಪಂಡರು ‌ಎದುರಾದರು. ಇವರು ಹೇಗೆ‌ ನಮ್ಮಿಂದ ಹಣ ದೋಚುತ್ತಾರೆ ಎಂದು ಕಾಶಿಯಲ್ಲಿ‌ ನೋಡಿದ್ದರಿಂದ ಆದಷ್ಟೂ ಇವರನ್ನು ಅವಾಯ್ಡ್ ಮಾಡಲು ಪ್ರಯತ್ನಿಸಿದೆ. ನೇರ ಹೋಗಿ ಎದುರಿಗಿದ್ದ ಕ್ಯೂನಲ್ಲಿ ನಿಂತೆ. ಆಚೆ ಇನ್ನೆರಡು ದೊಡ್ಡ ಕ್ಯೂ ಕಾಣಿಸಿತು. ನಾ ನಿಂತ ಕ್ಯೂ ಯಾವುದೋ ಉಪ ದೇವತೆಯಾಗಿರಬಹುದು ಮತ್ತು ಮುಖ್ಯ ದೇವರ ಗುಡಿ ಆಚೆ ಇರಬಹುದೆಂದುಕೊಂಡೆ. ಒಬ್ಬ ಪಂಡ ನನ್ನ ಹಿಂದೆಯೇ ಇದ್ದ. ಜನ ಜಾಸ್ತಿ ಇದ್ದದರಿಂದ ಆತನಲ್ಲಿ ದರ್ಶನ ಮಾಡಿಸಿ, ಪ್ರಸಾದ‌ ಅರ್ಪಿಸಿ ಕೊಡುವುದಾದರೆ ಐವತ್ತು ರೂಪಾಯಿ ಕೊಡುವುದಾಗಿ ಹೇಳಿದೆ. ಖುಷಿಯಿಂದ ಒಪ್ಪಿಕೊಂಡ. ನನ್ನ ಕ್ಯೂನಲ್ಲಿ ಮುಂದೆ ಇಬ್ಬರಿದ್ದರು. ಪಂಡನೂ ನನ್ನ ಮತ್ತು ಇವರ ಮಧ್ಯೆ ತೂರಿಕೊಂಡ. ನನ್ನ ಕೈಲಿದ್ದ ಪ್ರಸಾದದ ಸೆಟ್ ಆತನೇ ಹಿಡಿದುಕೊಂಡ. ಕೇವಲ ಐದೇ ನಿಮಿಷಗಳಲ್ಲಿ ಬಲ ಭಾಗದಲ್ಲಿರುವ ದೇವಿಯ ದರ್ಶನವಾಯಿತು. ಅಲ್ಲಿಯೇ ಇರುವ ಇನ್ನೊಬ್ಬ‌ ಪಂಡ ನಾನು ದರ್ಶನ ಮಾಡುತ್ತಿರುವಂತೆ, ಆರತಿ ಎತ್ತಿ ಕಾಣಿಕೆ ಕೇಳಿದ‌. 10ರೂ ನೀಡಲು ಮುಂದಾದೆ, ಆತ ಇಷ್ಟೇಯಾ ಅನ್ನುವಂತೆ‌ ಮುಖ ಮಾಡಿದ. ನಾನು ಆಗುವುದಿಲ್ಲ, ಇಷ್ಟೇ ‌ಎಂದೆ. ಆತ 10ರೂ ತೆಗೆದು ಕೊಳ್ಳದೆ, ದೊಡ್ಡಸ್ತಿಕೆ‌ ತೋರಿಸಿದ. ನಾನು‌ ಒಂದು ಹೆಜ್ಜೆ ಮುಂದಿಡುವಷ್ಟರಲ್ಲಿ ಇನ್ನೊಬ್ಬ ಚಿಕ್ಕ ಪ್ರಾಯದ ಪಂಡ, ನನ್ನ ಹಣೆ ತುಂಬ ಕುಂಕುಮ ಬಳಿದು, ಆ ಹತ್ತು ರೂಪಾಯಿ ಕೇಳಿದ. ಕೊಟ್ಟಿದ್ದೆ ತಡ, ಅಲ್ಲೆ ಮುಂದಿದ್ದ ಇನ್ನೊಬ್ಬನೂ ಹಣೆಗೆ ಕುಂಕುಮ ಬಳಿಯಲು ಮುಂದಾದ. ಬೇಡವೆಂಬಂತೆ ಆತನ ಕೈ ಹಿಡಿದು ದೂಡಿ ಮುನ್ನೆಡೆದೆ. ಇಷ್ಟೆಲ್ಲಾ ಕೇವಲ ಎರಡು ಮೂರು ನಿಮಿಷದಲಿ ನೆಡೆದಿರಬಹುದು. ಮೊದಲನೇ ಪಂಡ ನನ್ನ ಹಿಂದೆಯೇ ಇದ್ದ. ನಾನು ತಂದ ಪ್ರಸಾದ ಸೆಟ್ ಅನ್ನು ಹಿಂತಿರುಗಿಸಿ, ಹೇಳಿದಂತೆ 50 ರೂಪಯಿ ಕೊಡಿಯೆಂದು ಕೇಳಿದ. ನಾನು ಆಶ್ಚರ್ಯದಿಂದ "ಹೋ ಗಯಾ" ಎಂದು ಕೇಳಿದೆ. ಆತ ಮುಗುಳ್ನಗುವೊಂದಿಗೆ ಹೂಂ ಎಂದ. ನಾನು ದರ್ಶನ ಮಾಡಿದ ದೇವಿಯೆ ಅಲ್ಲಿನ ಮುಖ್ಯ ದೇವತೆಯಾದ ವಿಂಧ್ಯವಾಸಿನಿ ದೇವಿ ಎಂದು ಆಗಲೇ ನನಗೆ ಫ್ಲಾಶ್ ಆಗಿದ್ದು. ಸಿಟ್ಟು ನೆತ್ತಿಗೇರಿ ಇಷ್ಟಕ್ಕೆ ನಾನು 50 ರೂ ಕೊಡುವುದಿಲ್ಲ ಎಂದೆ. ಆತ ದೇವರ ಭಯ ತೋರಿಸಿದ್ದರಿಂದ ಹಣ ಕೊಡಲೇ ಬೇಕಾಯಿತು. ನಂತರ ದೇವಸ್ಥಾನಕ್ಕೆ ಒಂದು ಸುತ್ತು ಬಂದಾಗ, ಆ ಸಮಯದಲ್ಲಿ ದೇವಸ್ಥಾನದ ಬಾಗಿಲು ಮುಚ್ಚಿದ್ದರಿಂದ ಅಲ್ಲಿ ಜನರು ಮಾತೆಯ ದರ್ಶನಕ್ಕಾಗಿ ಗರ್ಭಗುಡಿಯ ಒಳಗೆ ಹೋಗಲು ಕಾಯುತ್ತಿದ್ದಾರೆಂದು ತಿಳಿಯಿತು. ಆ ಪಂಡ ನನಗೆ ಕಿಟಕಿಯಿಂದಲೇ ಮಾತೆಯ ದರ್ಶನ ಮಾಡಿಸಿ   50ರೂ ಕಿತ್ತುಕೊಂಡಿದ್ದ.

ಇಂತಹ ಜಾಗದಲ್ಲಿ, ಈ ರೀತಿಯಲ್ಲಿ ದೇವರ ದರ್ಶನ ಮಾಡಿದ್ದರಿಂದ ಯಾವ ಫಲ ಇದೆಯೋ. ಹೇಗೋ ಕಷ್ಟದಿಂದ ಆ ಸ್ಥಳದಲ್ಲಿರುವ ದೇವತೆಯ ದರ್ಶನ ಮಾಡುವುದು ಮುಖ್ಯವೋ ಅಥವಾ ದೂರದಿಂದ, ಶುದ್ಧ ಮನಸ್ಸಿನಿಂದ ಭಕ್ತಿಯ ಪ್ರಾರ್ಥನೆ ಅರ್ಪಿಸುವುದು ಒಳಿತೋ ತಿಳಿಯಲ್ಲಿಲ್ಲ. ನಂತರ ಕ್ಯೂ ನಲ್ಲಿ ಕಾದು ಇನ್ನೊಮ್ಮೆ ಆ ಮಾತೆಯ ದರ್ಶನ  ಮಾಡಿಕೊಂಡು ಬಂದೆ.

ಆಮ್ ಪನ್ನಾ  

ಆ ಬಿಸಿಲಿನ ಬೇಗೆಯಿಂದ ಬಸವಳಿದವರಿಗೆ ಆಮ್ ಪನ್ನಾ ಎಂಬ ಈ ಪೇಯ ಓಯಸಿಸ್ ನಂತೆ. ಬೇಯಿಸಿದ ಮಾವಿನ ಕಾಯಿ, ಪುದಿನ ಚಟ್ನಿಯಿಂದ ತಯಾರಾಗುವ ಈ ಪೇಯ ರಸ್ತೆ ಬದಿಯ ಗಾಡಿಯಲ್ಲಿ ಕಂಡಾಗ ಮನಸ್ಸು ತಡೆಯಲಿಲ್ಲ, ಯಾವ ನೀರು ಉಪಯೋಗಿಸಿರುತ್ತಾರೋ ಎಂಬ ಅನುಮಾನವಿದ್ದರೂ, ಮೊದಲು ಬದುಕುವುದು ಮುಖ್ಯವೆಂದು ಎರಡು ಗ್ಲಾಸ್ ಗಟಕಿಸಿದೆ. ಕೊಂಚ ಹುಳಿ ರುಚಿ ಹೊಂದಿರುವ ಈ ಪೇಯ ಉತ್ತಮ ಜೀರ್ಣಕಾರಿ ಎಂದು ತಿಳಿದೆ. ದರ್ಶನದ ಕಹಿ ನೆನಪನ್ನು ಅಲ್ಲಿಯೇ ಬಿಟ್ಟು ವಾರಾಣಸಿ ಕಡೆ ಹೊರಟೆ. 

ರಬಡಿ - ಪೇಡ 
rabdi, peda
mirzapur
ರಬಡಿ
ಮಿರ್ಜಾಪುರದಿಂದ ವಾರಣಾಸಿ ಕಡೆಗೆ ಹೋಗುವ ದಾರಿಯ ಬದಿಯಲ್ಲಿ ರಬಡಿ ಮತ್ತು ಪೇಡ ಮಾರುವ ಸಾಲು ಸಾಲು ಅಂಗಡಿಗಳಿವೆ. ಕ್ಯಾಬ್ ಚಾಲಕ, ಹಾಲಿನಿಂದ ತಯಾರಾಗುವ ಈ ಸಿಹಿ ತಿನಿಸುಗಳು ಇಲ್ಲಿ ತುಂಬಾ ತಾಜಾ ವಾಗಿರುತ್ತವೆ ಮತ್ತು ಇವುಗಳು ಇಲ್ಲಿಯ ವಿಶೇಷವೆಂದು ಹೇಳಿದಾಗ ಹಾಗೂ ಸಿಹಿ ತಿಂಡಿಗಳು ನನ್ನ ದೌರ್ಬಲ್ಯ ವಾಗಿರುವುದರಿಂದ ಕೂಡಲೇ ನಿಲ್ಲಿಸಲು ಸೂಚಿಸಿದೆ. ಹಾಲನ್ನು ಕಾಯಿಸಿ ಮಾಡುವ ಈ ತಿಂಡಿ ತಾಜಾ ತಿಂದರೆ ರಬಡಿ, ಬಾಣಲೆಯಲ್ಲಿ ಒಣಗಿಸಿದರೆ ಪೇಡ. ರಬಡಿಯನ್ನು ಅಲ್ಲೇ ತಿಂದು, ಕಾಲು ಕೆಜಿ ಪೇಡ ಕಟ್ಟಿಸಿಕೊಂಡೆ. ಅಂತಹ ಅದ್ಭುತ ರುಚಿಯೇನೂ ಇರಲಿಲ್ಲ ಅಥವಾ ನನ್ನ ರುಚಿ ಮೆಚ್ಚುಗೆಯ ಅನುಭವಕ್ಕೆ ಹಿಡಿಸಲಿಲ್ಲವೆನ್ನಬಹುದು.  ಶುಚಿತ್ವ ಕೂಡ ಅಷ್ಟಕ್ಕಷ್ಟೇ. ಅಲ್ಲಿಂದ ವಾರಣಾಸಿಯಲ್ಲಿರುವ ಹೋಟೆಲ್ ಸೇರುವಾಗ ಸುಸ್ತಾಗಿತ್ತು. 

Saturday, July 11, 2015

SECC-2011- ಸಾಮಾಜಿಕ, ಆರ್ಥಿಕ ಮತ್ತು ಜಾತಿ ಸಮೀಕ್ಷೆಯ ವಿಶ್ಲೇಷಣೆ - ಗ್ರಾಮೀಣ ಕರ್ನಾಟಕದ ಸ್ಥಿತಿ ಗತಿ

ಹಿಂದಿನ ವಾರ ಭಾರತ ಸರ್ಕಾರ,  2011ರಿಂದ 2013 ರ ನಡುವೆ ನಡೆಸಿದ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿಯ (SECC 2011) ಭಾಗಶಃ ವರದಿ ಬಿಡುಗಡೆ ಗೊಳಿಸಿದೆ. ಭಾಗಶಃ ಏಕೆಂದರೆ ಜಾತಿ ಗಣತಿಯ ವರದಿಯನ್ನು ರಾಜಕೀಯ ಕಾರಣಗಳಿಂದ ಬಿಡುಗಡೆ ಮಾಡಿಲ್ಲ ಹಾಗೂ ನಗರ ಪ್ರದೇಶಗಳಿಗೆ ಸಂಬಂದ ಪಟ್ಟ ಮಾಹಿತಿಯನ್ನು ಈ ವರದಿ ಒಳಗೊಂಡಿಲ್ಲ. ಹಾಗಾಗಿ ಬಿಡುಗಡೆಗೊಳಿಸಿದ ವರದಿ ಸಧ್ಯಕ್ಕೆ ಗ್ರಾಮೀಣ ಭಾರತದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಂಕಿ ಸಂಖ್ಯೆ ಗಳನ್ನಷ್ಟೇ ಒಳಗೊಂಡಿದೆ.

ಏನಿದು?

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳಲ್ಲಿ "ಬಡತನ ರೇಖೆ" ಗಿಂತ ಕೆಳಮಟ್ಟದಲ್ಲಿರುವ ಕುಟುಂಬಗಳನ್ನು ನಿಖರವಾಗಿ ಗುರುತಿಸುವ ಮುಖ್ಯ ಉದ್ದೇಶದಿಂದ ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ 2011ರಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಸಮೀಕ್ಷೆ ಯೋಜನೆ (SECC 2011) ಕೈಗೆತ್ತಿಕೊಂಡಿತು. ಈ ಸಮಗ್ರ ಸಮೀಕ್ಷೆಯು ಕೆಳಕಂಡ  ಮೂರು ಗುರಿಗಳನ್ನು ಹೊಂದಿತ್ತು. 

  1. ಕುಟುಂಬಗಳನ್ನು ಅವುಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಆಧಾರದ ಮೇಲೆ ವರ್ಗೀಕರಣ (Rank) ಮಾಡುವುದು. ನಂತರ ಈ ಆಧಾರದ ಮೇಲೆ ರಾಜ್ಯ ಸರ್ಕಾರಗಳು ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ವಾಸಿಸುತ್ತಿರುವ ಕುಟುಂಬಗಳ ಪಟ್ಟಿ ತಯಾರಿಸಬಹುದು. 
  2. ಅಧಿಕೃತ ಜಾತಿವಾರು ಜನಸಂಖ್ಯೆಯ ಮಾಹಿತಿ ದೊರಕುವಂತೆ ಮಾಡುವುದು. 
  3. ವಿವಿಧ  ಜಾತಿಗಳ ಸಾಮಾಜಿಕ, ಅರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಅಧಿಕೃತ ಮಾಹಿತಿ ಲಭ್ಯ ವಾಗುವಂತೆ ಮಾಡುವುದು
ಸಧ್ಯಕ್ಕೆ ಕೇವಲ ಪಾಯಿಂಟ್ 1 ರ ಮಾಹಿತಿ ಲಭ್ಯವಿದೆ.

ಕುಟುಂಬಗಳ ವರ್ಗೀಕರಣ ಹೇಗೆ?

ಗ್ರಾಮೀಣ ಪ್ರದೇಶದಲ್ಲಿರುವ ಕುಟುಂಬಗಳು ಬಡತನವನ್ನು ತೋರಿಸುತ್ತಿವೆಯೇ ಎಂದು ತೀರ್ಮಾನಿಸಲು ಮೂರು ಹಂತದ ನಿರ್ಣಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಅವೆಂದರೆ

  1. ಖಂಡಿತ ಬಡವರಲ್ಲ (Automatic exclusion)
  2. ಬಡವರಿರಬಹುದು (Tested for deprivation) 
  3. ಖಂಡಿತ ಬಡವರು (Automatic Inclusion)
ಪ್ರತಿಯೊಂದು ಹಂತಕ್ಕೂ ಕೆಳಗೆ ನೀಡಿದಂತೆ ಕೆಲವೊಂದು ಸಾಮಾಜಿಕ ಮತ್ತು ಆರ್ಥಿಕ ಸೂಚಕಗಳನ್ನು ನಿಗಧಿ ಪಡಿಸಿದ್ದಾರೆ.

ಖಂಡಿತ ಬಡವರಲ್ಲ
ಬಡವರಿರಬಹುದು
ಖಂಡಿತ ಬಡವರು
ಕುಟುಂಬವು ಕೆಳಗಿನ ಯಾವುದಾದರೂ ಒಂದನ್ನು ಹೊಂದಿದ್ದಲ್ಲಿ
ಕುಟುಂಬವು ಕೆಳಗಿನ  7 'ಬಡತನ ಸೂಚಕ'  ಗಳಲ್ಲಿ ಹೆಚ್ಚು ಸೂಚಕಗಳನ್ನು ಹೊಂದಿದಂತೆ "ಖಂಡಿತ ಬಡವರು" ಪಟ್ಟಿಯಲ್ಲಿ ಒಳಗೊಳ್ಳಲು ಆದ್ಯತೆ ಹೆಚ್ಚು.
ಕುಟುಂಬವು ಕೆಳಗಿನ ಯಾವುದಾದರೂ ಒಂದನ್ನು ಹೊಂದಿದ್ದಲ್ಲಿ
1. 2/3/4 ಚಕ್ರದ ವಾಹನಗಳು /ಮೀನುಗಾರಿಕಾ ದೋಣಿ
2. 3/4 ಚಕ್ರದ ಯಾಂತ್ರಿಕ ಕೃಷಿ ಉಪಕರಣ
3. ರೂ 50,000 ಅಥವಾ ಅದಕ್ಕೂ ಮೇಲ್ಪಟ್ಟು ಸಾಲ ಮಿತಿ ಹೊಂದಿರುವ  ಕಿಸಾನ್ ಕ್ರೆಡಿಟ್ ಕಾರ್ಡ್
4. ಕುಟುಂಬದ ಯಾವುದೇ ಸದಸ್ಯ ಸರ್ಕಾರಿ ನೌಕರನಾಗಿದ್ದಲ್ಲಿ
5. ಭಾರತ ಸರ್ಕಾರಕ್ಕೆ ನೊಂದಾಯಿತ ಕೃಷ್ಯೇತರ ಉದ್ಯಮ
6. ರೂ. 10,000 ಕ್ಕೂ ಮೇಲ್ಪಟ್ಟು ಸಂಪಾದಿಸುವ ಕುಟುಂಬದ ಸದಸ್ಯ
7. ಆದಾಯ ತೆರಿಗೆ ಪಾವತಿಸುತ್ತಿದ್ದಲ್ಲಿ
8. ವೃತ್ತಿಪರ ತೆರಿಗೆ ಪಾವತಿಸುತ್ತಿದ್ದಲ್ಲಿ
9. ಪಕ್ಕಾ ಗೋಡೆ ಮತ್ತು ಛಾವಣಿ ಹೊಂದಿರುವ ಮೂರು ಅಥವಾ ಅಧಿಕ ಕೋಣೆಗಳು
10. ಸ್ವಂತ ರೆಫ಼್ರಿಜಿರೇಟರ್
11. ಸ್ವಂತ ಸ್ಥಿರ ದೂರವಾಣಿ
12. ಸ್ವಂತ 2.5 ಎಕರೆ ನೀರಾವರಿ ಭೂಮಿ, ಕನಿಷ್ಟ ಒಂದು ನೀರಾವರಿ ಉಪಕರಣದೊಂದಿಗೆ
13. ಎರಡು ಅಥವಾ ಜಾಸ್ತಿ ಬೆಳೆಗಳಿಗೆ, 5 ಅಥವಾ ಅಧಿಕ ಎಕರೆ ನೀರಾವರಿ ಭೂಮಿ
14. ಸ್ವಂತ ಕನಿಷ್ಟ 7.5 ಎಕರೆ ಅಥವಾ ಜಾಸ್ತಿ ಭೂಮಿ, ಕನಿಷ್ಟ ಒಂದು ನೀರಾವರಿ ಉಪಕರಣದೊಂದಿಗೆ
1. ಕಚ್ಚಾ ಗೋಡೆ ಹಾಗೂ ಛಾವಣಿ ಹೊಂದಿರುವ ಒಂದೇ ಕೋಣೆಯಲ್ಲಿ ವಾಸಿಸುವ ಕುಟುಂಬ
2. 16 ರಿಂದ 59 ವಯಸ್ಸಿನ ಸದಸ್ಯ ಕುಟುಂಬದಲ್ಲಿ ಇಲ್ಲದಿದ್ದಲ್ಲಿ
3. 16 ರಿಂದ 59 ವಯಸ್ಸಿನ ಯಾವುದೇ ಪುರುಷ ಸದಸ್ಯ ಕುಟುಂಬದಲ್ಲಿ ಇಲ್ಲದೇ, ಮಹಿಳೆ ಯಜಮಾನಿಯಾಗಿರುವ ಕುಟುಂಬ
4. ಯಾವುದೇ ಸಬಲ ಸದಸ್ಯನಿಲ್ಲದೇ ಅಂಗವಿಕಲ ಸದಸ್ಯರಿರುವ ಕುಟುಂಬ
5. SC/ST ಸೇರಿರುವ ಕುಟುಂಬ
6. 25 ವರ್ಷಕ್ಕೆ ಮೇಲ್ಪಟ್ಟ ಯಾವುದೇ ಅಕ್ಷರಸ್ಥ ಸದಸ್ಯರಿಲ್ಲದ ಕುಟುಂಬ
7. ತಮ್ಮ ಹೆಚ್ಚಿನ ಆದಾಯವನ್ನು ದೈಹಿಕ ಕೂಲಿ ಕಾರ್ಮಿಕ ದುಡಿಮೆಯಿಂದ  ಗಳಿಸುವ ಭೂ ರಹಿತ ಕುಟುಂಬಗಳು


1. ಆಶ್ರಯವಿಲ್ಲದ ಕುಟುಂಬ
2. ನಿರ್ಗತಿಕರು/ ಭಿಕ್ಷುಕರು
3. ಮಾನ್ಯುಯಲ್ ಸ್ಕಾವೆಂಜೆರ್
4. ಪ್ರಾಚೀನ ಬುಡಕಟ್ಟು ಪಂಗಡಗಳು
5. ಕಾನೂನಿನ ರೀತ್ಯಾ ಬಿಡಿಸಿದ ಬಂಧಿತ ಕಾರ್ಮಿಕರುಈ ಸೂಚಕಗಳನ್ನು ಗಮನಿಸಿದಾಗ ಸ್ವಂತ ರೆಫ್ರಿಜಿರೇಟರ್ ಹೊಂದಿರುವುದು, ಕುಟುಂಬಗಳನ್ನು "ಬಡವರಲ್ಲ"ಎಂದು ನಿಗಧಿ ಪಡಿಸುವ ಒಂದು ಸೂಚಕವನ್ನಾಗಿ ಅಳವಡಿಸಿಕೊಂಡಿರುವುದು ಯಾಕೆ ಎಂದು ಅರ್ಥವಾಗುತ್ತಿಲ್ಲ. ರೆಫ್ರಿಜಿರೇಟರ್ ಗಿಂತ ಸ್ವಂತ  "ಟಿವಿ" ಹೊಂದಿರುವುದನ್ನು ಒಂದು ಸೂಚಕವಾಗಿ ಪರಿಗಣಿಸಬಹುದಿತ್ತು. ಇದರಿಂದ ಮೀಡಿಯಾ ಮೂಲಕ ಹಳ್ಳಿಗಳಲ್ಲಿನ ಎಷ್ಟು ಕುಟುಂಬಗಳನ್ನು ತಲುಪಬಹುದು ಎಂಬ ಅಂದಜಾದರೂ ಸಿಗುತ್ತಿತ್ತು.  ಅಲ್ಲದೆ ಟಿವಿ ನಡೆಸಲು ಪ್ರತಿ ತಿಂಗಳೂ ಹಣ ತೆರಬೇಕಾಗಿ (DTH or Cable) ಬರುವುದರಿಂದ, ರೆಫ್ರಿಜಿರೇಟರ್ ಕ್ಕಿಂತ ಟಿವಿ ಹೊಂದಿರುವುದೇ ಬಡವರಲ್ಲ ಎಂಬುದಕ್ಕೆ ಸರಿಯಾದ ಸೂಚಕ ಎಂದು ನನ್ನ ಅಭಿಪ್ರಾಯ. 

ಮೇಲಿನ ಮೂರು ಹಂತಗಳ ಹೊರತಾಗಿನಾಲ್ಕನೆಯ ಇನ್ನೊಂದು ಹಂತವನ್ನು ಗುರುತಿಸಬಹುದುಅದೆಂದರೆ ಮೇಲಿನ  ಯಾವುದೇ 26 ಸೂಚಕಗಳನ್ನೂ ಪೂರೈಸದೇ ಇರುವ ಕುಟುಂಬಗಳು. 26 ಸೂಚಕಗಳನ್ನು ಸರಿಯಾಗಿ ಗಮನಿಸಿದರೆ ಇಂತಹ ಕುಟುಂಬಗಳು "ಖಂಡಿತ ಬಡವರಲ್ಲ" ಮತ್ತು "ಬಡವರಿರಬಹುದು" ಗುಂಪುಗಳ ನಡುವೆ ಬರುತ್ತವೆ ಎಂದು ಹೇಳಬಹುದು. ಆ ಕಾರಣಕ್ಕಾಗಿ ಇಂತಹ ಕುಟುಂಬಗಳನ್ನು ಬಡವರಲ್ಲಎಂದು ಕರೆಯಬಹುದು

ಕೆಳಗಿನ ಟೇಬಲ್ ನಲ್ಲಿ ಮೇಲಿನ ನಾಲ್ಕು ಗುಂಪಿಗೆ ಸೇರಿದ ಕುಟುಂಬಗಳ ಸಂಖ್ಯೆ ನೀಡಿದೆ.


Excluded
Considered for deprivation
Included
 ಖಂಡಿತ ಬಡವರಲ್ಲ
 ಬಡವರಲ್ಲ
 ಬಡವರಿರಬಹುದು
 ಖಂಡಿತ ಬಡವರು
ಭಾರತ
7,05,71,907
(39.4%)
2,00,71,914 
(11.2%)
8,68,70,785 
(48.49%)
16,50,153
(0.92%)
ಕರ್ನಾಟಕ
     40,22,726 
(50%)
11,59,350
 (14.4%)
28,36,544
(35.24%)
30,074
(0.37%)karnataka, India, deprivation

ಕರ್ನಾಟಕದ ಅರ್ಧ ಸಂಖ್ಯೆಯ ಕುಟುಂಬಗಳು ಖಂಡಿತ ಬಡವರಲ್ಲ ಎಂಬುದನ್ನು ನೋಡಿ ಸಮಾಧಾನವಾಗುತ್ತಿದೆ. ರಾಷ್ಟ್ರೀಯ ಸರಾಸರಿಗೆ ಹೋಲಿಸಿದಲ್ಲಿ, ಕರ್ನಾಟಕ ಸ್ವಲ್ಪ ಮಟ್ಟಿಗೆ ಉತ್ತಮ. ಈ ವರದಿಯಲ್ಲಿ ಬಡತನದಲ್ಲಿರುವ ಕುಟುಂಬಗಳ ಸಂಖ್ಯೆಯನ್ನು ನಿಖರವಾಗಿ ನೀಡಿಲ್ಲ. ಆದರೆ ಇನ್ನೂ ಸುಮಾರು 36% ಕುಟುಂಬಗಳು ಬಡತನದಿಂದ ಪಾರಾಗಿಲ್ಲ ಎಂದು ಅಂದಾಜಿಸಬಹುದು. ಕರ್ನಾಟಕ ಸರ್ಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯೂ ಇರುವುದರಿಂದ, ಎರಡೂ ವರದಿಗಳನ್ನು ಪರಿಶೀಲಿಸಿ ಸರಿಯಾದ "ಬಡತನ ರೇಖೆ " ಯನ್ನು ಕರ್ನಾಟಕ ಸರ್ಕಾರ  ಅಳವಡಿಸಿಕೊಳ್ಳಬೇಕು. ಅಷ್ಟೇ ಅಲ್ಲದೆ ಕುಟುಂಬಗಳನ್ನು ಬಡತನದಿಂದ ಪಾರುಮಾಡಲು ಸಮಗ್ರ ಕಾರ್ಯ ನೀತಿ ನಿರೂಪಿಸಿ, ಅದರ ಪ್ರಯೋಜನಗಳನ್ನು ಅರ್ಹ ಕುಟುಂಬಗಳಿಗೆ ಸಿಗುವಂತೆ ನೋಡಿಕೊಳ್ಳುವುದು ಅವಶ್ಯಕ.  


SECC 2011 ವರದಿಯಲ್ಲಿ ಸಿಗುವ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಇನ್ನಿತರ ಪ್ರಮುಖ ಮಾಹಿತಿಗಳನ್ನು ವಿಶ್ಲೇಷಿಸುವ ಪ್ರಯತ್ನ ಮಾಡಿದ್ದೇನೆ.  

1. ಕುಟುಂಬದ ವಿವರಗಳು 

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 17,91,64,759 ಹಾಗೂ ನಗರ ಪ್ರದೇಶಗಳಲ್ಲಿ 6,47,80,538 ಕುಟುಂಬಗಳಿವೆ. ಕರ್ನಾಟಕದಲ್ಲಿರುವ ಒಟ್ಟು 1,31,39,093 ಕುಟುಂಬಗಳ ಪೈಕಿ 80,48,694 ಗ್ರಾಮೀಣ ಪ್ರದೇಶಗಳಲ್ಲಿದ್ದರೆ, ಉಳಿದ 50,90,399 ಕುಟುಂಬಗಳು ನಗರ ಪ್ರದೇಶದಲ್ಲಿ ವಾಸವಾಗಿವೆ. ಕರ್ನಾಟಕ ಸರ್ಕಾರ 2015ರಲ್ಲಿ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿರುವ ಒಟ್ಟು ಕುಟುಂಬಗಳ ಸಂಖ್ಯೆ  1,41,54,632 ಕ್ಕೆ ಏರಿದೆ.  

HOUSEHOLDS

ಗ್ರಾಮೀಣ ಕುಟುಂಬಗಳು 

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿರುವ ಒಂದು ಕುಟುಂಬದಲ್ಲಿ ಸರಾಸರಿ 4.93 ಸದಸ್ಯರಿದ್ದಾರೆ. ಅದೇ ಕರ್ನಾಟಕದಲ್ಲಿ 4.74 ಸದಸ್ಯರಿದ್ದಾರೆ. ಆಂದ್ರ ಪ್ರದೇಶದಲ್ಲಿ ಅತಿ ಕಡಿಮೆ ಅಂದರೆ 3.86 ಸದಸ್ಯರಿದ್ದರೆ, ಉತ್ತರ ಪ್ರದೇಶದ ಒಂದು ಕುಟುಂಬದಲ್ಲಿ ಅತಿ ಹೆಚ್ಚು ಅಂದರೆ ಸರಾಸರಿ 6.26 ಸದಸ್ಯರಿದ್ದಾರೆ.   

ಕರ್ನಾಟಕದ 18.57%  ಕುಟುಂಬಗಳಲ್ಲಿ ಮಹಿಳೆ ಯಜಮಾನಿಯಾಗಿದ್ದಾಳೆ. ಮಹಿಳೆ ಯಜಮಾನಿಯಾಗಿರುವ ಕುಟುಂಬಗಳು ಲಕ್ಷದ್ವೀಪದಲ್ಲಿ ಅತಿ ಹೆಚ್ಚು  - 40.64%, ನಂತರದಲ್ಲಿ ಕೇರಳ - 26.25%  ಇವೆ. ಇದರಲ್ಲಿ ಎಷ್ಟು ಭಾಗ,  ವಯಸ್ಕ ಪುರುಷ ಇರುವ ಕುಟುಂಬದಲ್ಲಿ ಮಹಿಳೆ ಯಜಮಾನಿಯಾಗಿದ್ದಾಳೆ ಮತ್ತು ವಯಸ್ಕ ಪುರುಷ ಇಲ್ಲದೆ ಇರುವ ಕುಟುಂಬದಲ್ಲಿ ಮಹಿಳೆ ಯಜಮಾನಿಯಗಿದ್ದಾಳೆ ಎನ್ನುವ ವಿವರ ನಿಖರವಾಗಿ ಸಿಗುವುದಿಲ್ಲ.  

2. ಶೈಕ್ಷಣಿಕ ವಿವರಗಳು 

ಭಾರತದ ಹಳ್ಳಿಗಳಲ್ಲಿ ಒಟ್ಟಾರೆ 35.73%  ಜನ ಅನಕ್ಷರಸ್ತರು. ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಅನಕ್ಷರಸ್ಥರ ಸಂಖ್ಯೆ 1,20,41,747 ಅಂದರೆ ಒಟ್ಟು ಜನ ಸಂಖ್ಯೆಯ 31.54% . ಲಕ್ಷದ್ವೀಪ (9.30%) ಹಾಗೂ ಕೇರಳ (11.38%) ಅತಿ ಕಡಿಮೆ ಅನಕ್ಷರಸ್ಥರನ್ನು ಹೊಂದಿದೆ. ಕರ್ನಾಟಕದಲ್ಲಿ ಎಷ್ಟು ಜನ ಯಾವ ಮಟ್ಟದಲ್ಲಿ ಶಿಕ್ಷಣ ಮುಗಿಸಿದ್ದಾರೆ ಎಂದು ಕೆಳಗಿನ ಚಾರ್ಟ್ ನಲ್ಲಿ ನೋಡಬಹುದು. 

EDUCATION


3. ಮನೆಗಳ ವಿವರ 


household
ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ 91.63% ಕುಟುಂಬಗಳು ಸ್ವಂತ ಮನೆ ಹೊಂದಿವೆ. ಆಶ್ಚರ್ಯವೇನಿಲ್ಲ. ಹಳ್ಳಿಗಳಲ್ಲಿ ಸ್ವಂತ ಮನೆ ಹೊಂದಿರುವುದು ಸಾಮಾನ್ಯ .


house ownership


ಕುಟುಂಬಗಳ ಸ್ವಾಧೀನದಲ್ಲಿರುವ ವಾಸಿಸುವ ಕೋಣೆಗಳು: 65% ಕುಟುಂಬಗಳು 1-2 ಕೋಣೆಗಳಿರುವ ಮನೆಗಳಲ್ಲಿ ವಾಸವಾಗಿವೆ. ಒಂದು ಕುಟುಂಬದಲ್ಲಿ ಸರಾಸರಿ 4.74 ಸದಸ್ಯರಿರುವುದರಿಂದ, ಹೆಚ್ಚಿನ ಕುಟುಂಬಗಳಲ್ಲಿ 1-2 ಕೋಣೆಗಳಲ್ಲಿ 4.74 ಜನರು ವಾಸವಾಗಿದ್ದಾರೆ ಎಂದು ತರ್ಕಿಸಬಹುದು. 

rooms

ಮನೆಗಳ ಗೋಡೆ ಮತ್ತು ಛಾವಣಿಗಳನ್ನು ನಿರ್ಮಿಸಲು ಉಪಯೋಗಿಸಿದ ಪ್ರಧಾನ ವಸ್ತುವಿನ ಆಧಾರದ ಮೇಲೆ ಕಚ್ಚಾ ಮತ್ತು ಪಕ್ಕಾ ರೀತಿ ಎಂದು ವಿಂಗಡಣೆ ಮಾಡಿದ್ದಾರೆ.  ಹೇಗೆ ಮತ್ತು ಅವುಗಳ ಸಂಖ್ಯೆ ಎಷ್ಟಿವೆ? ಮುಂತಾದ ಪ್ರೆಶ್ನೆಗಳಿಗೆ ಉತ್ತರ ಕೆಳಗಿನ ಟೇಬಲ್ ಗಳಲ್ಲಿ ನೋಡಬಹುದು. 

ಕರ್ನಾಟಕ : ಕೋಣೆ ಗೋಡೆಯ ಪ್ರಧಾನ ನಿರ್ಮಾಣ ವಸ್ತು 
ಕಚ್ಚಾ ರೀತಿ  – 43.50%
ಪಕ್ಕಾ ರೀತಿ  – 56.50%
 1. ಹುಲ್ಲು/ಬಿದಿರಿನಿಂದ ನಿರ್ಮಿತ 
8.6%
 1. ಗಾರೆ ಮಾಡಿ ಕೂಡಿಟ್ಟ ಕಲ್ಲಿನಿಂದ    ನಿರ್ಮಿತ
32.2%
 2. ಪ್ಲಾಸ್ಟಿಕ್ /ಪಾಲಿಥಿನ್ ನಿಂದ  ನಿರ್ಮಿತ 
1.3%
 2. ಜಿ  /ಲೋಹ /ಆಸ್ಬೆಸ್ಟೊಸ್  ತಗಡಿನಿಂದ ನಿರ್ಮಿತ
1.8%
 3.  ಮಣ್ಣು /ಸುಡದ ಇಟ್ಟಿಗೆಯಿಂದ ನಿರ್ಮಿತ 
57.6%
 3. ಸುಟ್ಟ ಇಟ್ಟಿಗೆಯಿಂದ ನಿರ್ಮಿತ 
56.2%
 4. ಮರ/ಕಟ್ಟಿಗೆಯಿಂದ ನಿರ್ಮಿತ 
3.1%
 4. ಕಾಂಕ್ರೀಟ್ ನಿಂದ ನಿರ್ಮಿತ 
7.6%
 5. ಗಾರೆ ಮಾಡದೇ ಕೂಡಿಟ್ಟ       ಕಲ್ಲಿನಿಂದ ನಿರ್ಮಿತ 
29.4%
 5. ಇತರೆ 
2.3%

100%

100%

ಕರ್ನಾಟಕ : ಕೋಣೆ ಛಾವಣಿಯ ಪ್ರಧಾನ ನಿರ್ಮಾಣ ವಸ್ತು
ಕಚ್ಚಾ ರೀತಿ  – 21%
ಪಕ್ಕಾ ರೀತಿ  – 79%
 1. ಹುಲ್ಲು/ಬಿದಿರು/ಮಣ್ಣು/ಮರ ದಿಂದ ನಿರ್ಮಿತ 
44%
 1. ಯಂತ್ರ ನಿರ್ಮಿತ ಹಂಚುಗಳು 
44.5%
 2. ಪ್ಲಾಸ್ಟಿಕ್ /ಪಾಲಿಥಿನ್ ನಿಂದ   ನಿರ್ಮಿತ 
 5.3%
 2. ಸುಟ್ಟ ಇಟ್ಟಿಗೆ 
 2.4%
 3. ಕರ ನಿರ್ಮಿತ ಹಂಚುಗಳು 
50.6% 
 3. ಕಲ್ಲು 
 9.9% 
 4. ಬಳಪ 
5.6%
 5. ಜಿ ಐ /ಲೋಹ /ಆಸ್ಬೆಸ್ಟೊಸ್     ತಗಡಿನಿಂದ ನಿರ್ಮಿತ
 17.1%
 6. ಕಾಂಕ್ರೀಟ್ ನಿಂದ ನಿರ್ಮಿತ 
 13.9%
7. ಇತರೆ 
 6.6%

 100%

 100%

ಇಲ್ಲಿ "ಇತರೆ" ನಿರ್ಮಾಣ ವಸ್ತುಗಳನ್ನು, ಅದು ಗೋಡೆಯಾಗಲಿ ಅಥವಾ ಛಾವಣಿಯಾಗಲಿ, ಪಕ್ಕಾ ರೀತಿಯೆಂದೇ ಪರಿಗಣಿಸಿದ್ದನ್ನು ಗಮನಿಸಬೇಕು. ಕಚ್ಚಾ ಗೋಡೆ ಮನೆಗಳು 43.50% ಮತ್ತು ಕಚ್ಚಾ ಛಾವಣಿ ಮನೆಗಳು 21% ಕುಟುಂಬಗಳು ಹೊಂದಿವೆ.  ಹಾಗಾದರೆ ಕರ್ನಾಟಕದಲ್ಲಿ ಒಟ್ಟು ಕಚ್ಚಾ ಮನೆಗಳನ್ನು ಹೊಂದಿರುವ ಕುಟುಂಬಗಳ ಸಂಖ್ಯೆ 11,70,341 ಮತ್ತು ಪಕ್ಕಾ ಮನೆಗಳನ್ನು ಹೊಂದಿರುವ ಕುಟುಂಬಗಳ ಸಂಖ್ಯೆ 32,27,338 ಎಂದು ವರದಿ ತಿಳಿಸುತ್ತದೆ. ಆದರೆ ಪಕ್ಕಾ ಮತ್ತು ಕಚ್ಚಾ ಮನೆಗಳ ಸಂಖ್ಯೆಯನ್ನು ಕೂಡಿಸಿದರೆ ಒಟ್ಟು ಕುಟುಂಬಗಳ ಸಂಖ್ಯೆಯಾದ 80,48,694 ಕ್ಕೆ ಸಮವಾಗಿಲ್ಲ. ವ್ಯತ್ಯಾಸ 31,51,015 ಮನೆಗಳಾಗಿವೆ. ಹೇಗೇ ಕೂಡಿಸಿ, ಕಳೆದರೂ ತಾಳೆಯಾಗುತ್ತಿಲ್ಲ. ಕಚ್ಚಾ ಮತ್ತು ಪಕ್ಕಾ ಮನೆಗಳ ಮಾಹಿತಿ ದೋಷ ಪೂರಿತವಾಗಿದೆ ಎಂದು ನನ್ನ ಅಭಿಪ್ರಾಯ. 
(Check herhttp://www.secc.gov.in/staticReportData?getReportId=C_5#)


4. ಉದ್ಯೋಗ ಮತ್ತು ಆದಾಯ 

ಕರ್ನಾಟಕದ ಗ್ರಾಮೀಣ ಭಾಗದಲ್ಲಿ 9.87% ಕುಟುಂಬಗಳು ಮಾತ್ರ ಸ್ಥಿರ ವರಮಾನ ಹೊಂದಿವೆ. ಇಂತಹ ಕುಟುಂಬದ ಒಬ್ಬರಾದರೂ ಸರ್ಕಾರಿ, ಸಾರ್ವಜನಿಕ, ಅಥವಾ ಖಾಸಗಿ ಕ್ಷೇತ್ರ ದಲ್ಲಿ ಉದ್ಯೋಗದಲ್ಲಿದ್ದಾರೆ. 

karnataka salaried jobs

ಆದಾಯ ತೆರಿಗೆ ಪಾವತಿಸುವ ಕರ್ನಾಟಕದ ಕುಟುಂಬಗಳ ಸಂಖ್ಯೆ  7,36,876, ಅಂದರೆ ಒಟ್ಟು ಕುಟುಂಬಗಳ 9.1%  ಮಾತ್ರ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಆದಾಯ ತೆರಿಗೆ ಪಾವತಿಸುವ ಕುಟುಂಬಗಳು 4.4% ಮಾತ್ರ. 

ಇನ್ನೊಂದು ಬಹು ವರದಿಯಾದ ಪ್ರಮುಖ ವಿವರವನ್ನು ನೋಡೋಣ. ಅದೆಂದರೆ ಕುಟುಂಬಗಳ ಮಾಸಿಕ ಆದಾಯ. ಭಾರತದಲ್ಲಿ 74.49% ಕುಟುಂಬಗಳಲ್ಲಿ, ಅತಿ ಹೆಚ್ಚು ಸಂಪಾದಿಸುವ ಸದಸ್ಯನ ಮಾಸಿಕ ಆದಾಯ ರೂ. 5000 ಕ್ಕಿಂತಲೂ ಕಡಿಮೆ. ಇನ್ನು 17.18% ಕುಟುಂಬಗಳಲ್ಲಿ ಅತಿ ಹೆಚ್ಚು ಸಂಪಾದಿಸುವ ಸದಸ್ಯನ ಆದಾಯ ರೂ. 5000-10,000  ಮತ್ತು 8.29% ಕುಟುಂಬಗಳಲ್ಲಿ ಮಾತ್ರ ಮಾಸಿಕ ಆದಾಯ ರೂ. 10,000 ಕ್ಕಿಂತ ಅಧಿಕವಾಗಿದೆ . ಕೆಳಗಿನ ಪಿರಮಿಡ್ ನಲ್ಲಿ ಮಾಸಿಕ ಆದಾಯದ ಆಧಾರದ ಮೇಲೆ ಕರ್ನಾಟಕದ ಕುಟುಂಬಗಳ ಸ್ಥಿತಿ ನೋಡಬಹುದು.


income pyramid

ಮಾಸಿಕ ಆರ್ಥಿಕ ಆದಾಯ ಮಾತ್ರ "ಬಡತನದ ಸೂಚಕ" ಅಲ್ಲ ಅನ್ನುವುದನ್ನು ನೆನಪಿನಲ್ಲಿಡಬೇಕು. ಆದರೂ ಸುಮಾರು 69% ಗ್ರಾಮೀಣ ಕುಟುಂಬಗಳು ರೂ. 5,000 ಕ್ಕಿಂತ ಕಡಿಮೆ ಮಾಸಿಕ ಆದಾಯ ಹೊಂದಿವೆ ಎಂದರೆ, ಪರಿಸ್ಥಿತಿ ನಿಜವಾಗಿಯೂ ಗಂಭೀರವಾಗಿದೆ. ರೂ. 5,000 ಕ್ಕಿಂತ ಕಡಿಮೆ ಮಾಸಿಕ ಆದಾಯ, ಕುಟುಂಬದಲ್ಲಿ ಅತಿ ಹೆಚ್ಚು ಸಂಪಾದನೆ ಮಾಡುವ ಸದಸ್ಯನದ್ದಾಗಿದ್ದರಿಂದ ಸಹಜವಾಗಿಯೇ ಉಳಿದ ಸದಸ್ಯರ ಆದಾಯ ಎಷ್ಟಿರಬಹುದು ಎಂಬ ಪ್ರಶ್ನೆ ಬರುತ್ತದೆ. ಈ ಸಮೀಕ್ಷೆಯಲ್ಲಿ ಆ ಪ್ರಶ್ನೆಯನ್ನು ಪ್ರಜ್ಞಾಪೂರ್ವಕವಾಗಿಯೇ ಕೈ ಬಿಟ್ಟಿದ್ದಾರೆ. ಮಾಸಿಕ ಆದಾಯ ಅಭದ್ರವಾಗಿರುವುದರಿಂದ, ಇತರ ಅನೇಕ ಸೂಚಕಗಳನ್ನು ಬಡತನದ ನಿರ್ಣಯ ಮಾಡಲು ಅಳವಡಿಸಿಕೊಂಡಿದ್ದಾರೆ ಎಂಬ ವಿವರಣೆ ನೀಡಿದ್ದಾರೆ. 

5. ಕುಟುಂಬ ಆದಾಯದ ಪ್ರಮುಖ ಮೂಲ  

ಒಟ್ಟಾರೆ ಭಾರತದಲ್ಲಿ 51.14%  ಗ್ರಾಮೀಣ ಕುಟುಂಬಗಳು ದೈಹಿಕ ಕೂಲಿ ಕಾರ್ಮಿಕ ದುಡಿಮೆಯನ್ನು (Manual casual labor) ಅವಲಂಬಿಸಿದ್ದರೆ, ಕರ್ನಾಟಕದಲ್ಲಿ ಹೆಚ್ಚಿನ ಅಂದರೆ 44.65% ಕುಟುಂಬಗಳು ಕೃಷಿಯನ್ನೇ ಅವಲಂಬಿಸಿವೆ. ಭಾರತದಲ್ಲಿ ಕೃಷಿಯನ್ನು ಅವಲಂಬಿಸಿದವರು ಈಗ ಕೇವಲ ಸುಮಾರು 30% ಕುಟುಂಬಗಳು ಮಾತ್ರ. ಭಾರತ "ಕೃಷಿ ಪ್ರಧಾನ ದೇಶ" ಎಂಬ ವ್ಯಾಖ್ಯಾನವನ್ನು ಬದಲಾಯಿಸುವ ಸಮಯ ಬಂದಿದೆ. 

INCOME SOURCE  6. ಆಸ್ತಿ ಮಾಲಿಕತ್ವದ ವಿವರಗಳು 

ಭಾರತದ 11.04% ಕುಟುಂಬಗಳು ರೆಫ್ರಿಜಿರೇಟರ್ ಹೊಂದಿವೆ ಮತ್ತು 20.69% ಕುಟುಂಬಗಳು,  2/3/4 ಚಕ್ರದ ವಾಹನಗಳು/ ಮೀನುಗಾರಿಕಾ ದೋಣಿ ಯನ್ನು ಹೊಂದಿವೆ. ಕರ್ನಾಟಕದಲ್ಲಿ ಈ ಸಂಖ್ಯೆಗಳು ಕ್ರಮವಾಗಿ 5.95% ಮತ್ತು 23.75% ಆಗಿವೆ. 


ಸ್ಥಿರ ದೂರವಾಣಿ ಅಥವಾ ಮೊಬೈಲ್ ಫೋನ್ ಹೊಂದಿರುವ ಕುಟುಂಬಗಳು
ಸ್ಥಿರ ದೂರವಾಣಿ ಮಾತ್ರ 
ಮೊಬೈಲ್ ಫೋನ್ ಮಾತ್ರ 
ಸ್ಥಿರ ದೂರವಾಣಿ ಮತ್ತು ಮೊಬೈಲ್ ಫೋನ್
ಯಾವುದೇ ದೂರವಾಣಿ ಇಲ್ಲ 
ಭಾರತ
 1.0%
 68.35%
 2.72%
 27.93%
ಕರ್ನಾಟಕ
 1.88%
 77.38%
 4.26%
 16.48%

ಕರ್ನಾಟಕದಲ್ಲಿ 80% ಕ್ಕೂ ಅಧಿಕ ಕುಟುಂಬಗಳು ಮೊಬೈಲ್ ಫೋನ್ ಹೊಂದಿವೆ! ಮೊಬೈಲ್ ಫೋನ್ ನ್ನು ಆಸ್ತಿ ಎಂದು ಪರಿಗಣಿಸದೆ ಇರುವುದೇ ಒಳಿತು. ಹೆಚ್ಚಿನ ಕುಟುಂಬಗಳಿಗೆ ಇದೊಂದು ಅವಶ್ಯಕತೆಯಾಗಿ ಪರಿಣಮಿಸಿದೆ.

7. ಭೂ ಮಾಲೀಕತ್ವದ ವಿವರಗಳು

ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಒಟ್ಟಾರೆ 3,45,79,432.78 ಎಕರೆ ಭೂಮಿ ಇದೆ. ಅದರಲ್ಲಿ ಸರಿಯಾಗಿ ಅರ್ಧದಷ್ಟು( 50%) ನೀರಾವರಿ ಭೂಮಿ. ಕುಟುಂಬಗಳ ಭೂ ಮಾಲೀಕತ್ವದ ಮಾಹಿತಿ ಕೆಳಗೆ ನೀಡಿದೆ. 

LAND OWNERSHIP

ಕರ್ನಾಟಕದಲ್ಲಿ ಕೇವಲ 2.61% ಕುಟುಂಬಗಳು ಮಾತ್ರ ರೂ. 50,000 ಅಥವಾ  ಅದಕ್ಕೂ ಮೇಲ್ಪಟ್ಟು ಸಾಲ ಮಿತಿ ಇರುವ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ್ದಾರೆ. 

ಒಟ್ಟಾರೆಯಾಗಿ ಈ ಸಮೀಕ್ಷೆ ಸರ್ಕಾರಕ್ಕೆ ಸೂಕ್ತ ಕಾರ್ಯ ನೀತಿ ನಿರೂಪಿಸಲು ಸಹಾಯವಾಗುವುದರಲ್ಲಿ ಸಂದೇಹವಿಲ್ಲ. 
--------------------------------------------------------------------------------------------------------------------------
Source for analysis: http://www.secc.gov.in/welcome